ಕೊಡಗುಜಿಲ್ಲಾ ಸುದ್ದಿ

ಹಾಕಿ‌ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಅವಕಾಶ ನೀಡಿ : ಕೂಡಿಗೆ ಕ್ರೀಡಾ ಶಾಲೆಗೆ ಪೋಷಕರ ಆಗ್ರಹ

ಕೊಡಗು: ಕೊಡಗು ಜಿಲ್ಲೆ ಹಾಕಿಯ ತವರೂರು. ಹಲವಾರು ಕ್ರೀಡಾಪಟುಗಳು ಕೊಡಗಿನಲ್ಲಿ ಹುಟ್ಟಿ ಹಾಕಿ ಕ್ರೀಡೆಯಲ್ಲಿ ಪರಿಣತಿ ಹೊಂದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿದ್ದಾರೆ. ಹಾಕಿಯ ತವರೂರು ಕೊಡಗಿನಲ್ಲಿ ರಾಜ್ಯದ ಪ್ರಥಮ ಕ್ರೀಡಾ ಪ್ರೌಢಶಾಲೆಯಾಗಿರುವ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ವಿಭಾಗಕ್ಕೆ ಸ್ಥಳೀಯ ಮತ್ತು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಸ್ಥಳೀಯ ಪೋಷಕರು ಒತ್ತಾಯಿಸಿದ್ದಾರೆ.

ಹಾಕಿ ಕ್ರೀಡೆಯಲ್ಲಿ ತನ್ನದೇ ಛಾಪನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಿದೆ. ಅದರಂತೆ ಕೂಡಿಗೆ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆ ಮತ್ತು ದೇಶಕ್ಕೆ ಕೀರ್ತಿ ತಂದುಕೊಟ್ಟಿರುತ್ತಾರೆ. ಆದರೆ ಇಂತಹ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಕಿ ಕ್ರೀಡೆಯಲ್ಲಿ ತರಬೇತಿ ಪಡೆಯಲು ಅವಕಾಶ ವಂಚಿತವಾಗುತ್ತಿದೆ ಎಂದು ಪೋಷಕರು ಅರೋಪಿಸಿದ್ದಾರೆ.

ಕೂಡಿಗೆ ಕ್ರೀಡಾ ಶಾಲೆಯಲ್ಲಿ ಕಳೆದ ತಿಂಗಳು ರಾಜ್ಯ ಮಟ್ಟದ ಕ್ರೀಡಾ ಶಾಲೆಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಆದರೆ ಇದರಲ್ಲಿ ಕೂಡಿಗೆ ಕ್ರೀಡಾ ಶಾಲೆಗೆ ಕಿರಿಯ ಮತ್ತು ಹಿರಿಯರ ವಿಭಾಗ ಸೇರಿದಂತೆ ಒಟ್ಟು 34 ವಿದ್ಯಾರ್ಥಿಗಳ ಆಯ್ಕೆಯಾಗಿದ್ದಾರೆ. ಆದರೆ ಜಿಲ್ಲೆಯ ಶೇಕಡಾ 90 ರಷ್ಟು ಹಾಕಿ ವಿಭಾಗದ ವಿದ್ಯಾರ್ಥಿಗಳನ್ನು ಹೊಸದಾಗಿ ಆರಂಭಿಸಿರುವ ಬಾಗಲಕೋಟೆಯ ಕ್ರೀಡಾ ಶಾಲೆಗೆ ಆಯ್ಕೆ ಮಾಡಲಾಗಿದೆ. ಆ ಶಾಲೆಯಲ್ಲಿ ಹಾಕಿ ತರಬೇತಿಗೆ ಬೇಕಾಗುವಷ್ಟು ವ್ಯವಸ್ಥೆಗಳು ಇನ್ನೂ ಆಗಿಲ್ಲ. ಆದರೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಜಿಲ್ಲೆಯ ವಿದ್ಯಾರ್ಥಿಗಳನ್ನು ಬಾಗಲಕೋಟೆಗೆ ಆಯ್ಕೆ ಮಾಡಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಿದ್ದು, ಇದರಿಂದಾಗಿ ಜಿಲ್ಲೆಯ ಹಾಕಿ ತರಬೇತಿ ವಿದ್ಯಾರ್ಥಿಗಳಿಗೆ ಭಾರೀ ತೊಂದರೆಗಳಾಗಲಿದ್ದು, ಇದನ್ನು ಸರಿಪಡಿಸಬೇಕೆಂಬುದು ಹಾಕಿ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಪೋಷಕರ ಒತ್ತಾಯವಾಗಿದೆ.

ಈ ಕುರಿತಂತೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಅವರ ಪ್ರತಿಕ್ರಿಯೆ ಬಯಸಿದಾಗ, ಆಯ್ಕೆ ಪ್ರಕ್ರಿಯೆ ಕೂಡಿಗೆಯಲ್ಲಿ ನಡೆದರೂ ಕ್ರೀಡಾ ಶಾಲೆಗಳಿಗೆ ಆಯ್ಕೆ ಮಾಡುವ ಜವಾಬ್ದಾರಿ ರಾಜ್ಯ ಮಟ್ಟದ ಅಧಿಕಾರಿಗಳದ್ದಾಗಿದೆ ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button