ಈರುಳ್ಳಿ ಕೊಳ್ಳೋರೇ ಇಲ್ಲ; ರೈತ ಕಂಗಾಲು

ಕಿರುಗುಂದ ರಫೀಕ್
ಚಿಕ್ಕಮಗಳೂರು: ಹೊಲದಿಂದ ಕಿತ್ತ ಈರುಳ್ಳಿಯನ್ನು ಚೀಲಗಳಿಗೆ ತುಂಬಿಸಿ, ಕೊಳ್ಳುವವರಿಗಾಗಿ ಕಾಯುತ್ತಾ ಕುಳಿತ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ಬೆಲೆ ಕುಸಿತದ ಪರಿಣಾಮ ಮಾರಾಟವಾಗದೆ ಚೀಲದೊಳಗೇ ಕೊಳೆಯತೊಡಗಿದೆ.
ಜಿಲ್ಲೆಯ ಬಯಲು ಭಾಗ ಕಡೂರು ತಾಲೂಕಿನ ಹಿರೇನಲ್ಲೂರು, ಚೌಳಹಿರಿಯೂರು, ಗಿರಿಯಾಪುರ ಸಹಿತ ಹಲವು ಹಳ್ಳಿಗಳಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ಈ ಭಾಗದ ಮಣ್ಣು ಹಾಗೂ ಹವಾಗುಣವು ಈರುಳ್ಳಿ ಬೆಳೆಗೆ ಸೂಕ್ತವೆಂದು ಹೆಚ್ಚಿನ ರೈತರು ಈರುಳ್ಳಿ ಬೆಳೆಯತ್ತ ಆಸಕ್ತಿ ತೋರಿದ್ದರು. ಹಿಂದೆ ಇಲ್ಲಿನ ರೈತರು ಈರುಳ್ಳಿ ಬೆಳೆಗೆ ಸ್ವತಃ ತಾವೇ ಬಿತ್ತನೆ ಬೀಜ ಮಾಡಿಕೊಳ್ಳುತ್ತಿದ್ದರು. ಸಕಾಲಕ್ಕೆ ಸಾಕಷ್ಟು ಮಳೆಯೂ ಆಗಿ ಉತ್ತಮ ಇಳುವರಿ ಲಭ್ಯವಾಗುತ್ತಿತ್ತು
ಈ ಬಾರಿ ಈರುಳ್ಳಿ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದ ರೈತರು ಉತ್ತರ ಕರ್ನಾಟಕ ಭಾಗದಿಂದ ಬಿತ್ತನೆ ಬೀಜಗಳನ್ನು ತಂದು ಬಿತ್ತಿದ್ದರು. ಆದರೆ ಆ ಬಿತ್ತನೆ ಬೀಜಗಳಲ್ಲಿ ಕೆಲವು ಕಳಪೆ ಗುಣಮಟ್ಟವಾಗಿತ್ತಲ್ಲದೆ, ಸಕಾಲಕ್ಕೆ ಮಳೆಯಾಗದೆ ಇಳುವರಿಯೂ ಕುಂಠಿತವಾಯಿತು. ಹೀಗಿರುವಾಗ ಈರುಳ್ಳಿಗೆ ಸೂಕ್ತ ಬೆಲೆಯೂ ಇಲ್ಲದಂತಾಗಿ, ರೈತರು ಈರುಳ್ಳಿ ಚೀಲಗಳ ನಡುವೆ ಕುಳಿತು ಕಣ್ಣೀರು ಹಾಕುವಂತಾಗಿದೆ.
“ಈರುಳ್ಳಿ ಬೆಳೆನಷ್ಟ ಮತ್ತು ಬೆಲೆ ಕುಸಿತದಿಂದ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಬಳ್ಳಾರಿ ಭಾಗದಿಂದ ದುಬಾರಿ ವೆಚ್ಚದಲ್ಲಿ ಬೀಜವನ್ನೂ ಖರೀದಿಸಿ ತಂದಿದ್ದೆವು. ಆದರೆ ಅದರಲ್ಲಿ ಕಳಪೆ ಬೀಜಗಳು ಇದ್ದವು. ಅಲ್ಲದೆ ರೋಗ ರುಜಿನ, ಟ್ರಾನ್ಸ್ಫೋರ್ಟ್, ಕೂಲಿ ಡಿಸೇಲ್ ಬೆಲೆ ಹಚ್ಚಾಗಿರುವುದರಿಂದ ನಿರ್ವಹಣೆ ದುಬಾರಿಯಾಗಿ, ಭಾರೀ ನಷ್ಟ ಅನುಭವಿಸುವಂತಾಗಿದೆ. ಹೊಲದಲ್ಲಿರುವ ಈರುಳ್ಳಿಯನ್ನು ಕೀಳಲು ಹಿಂದೇಟು ಹಾಕುವಂತಾಗಿದೆ. ಹಿಂದೆ 1 ಎಕರೆ ಈರುಳ್ಳಿ ಬೆಳೆಯಲು 40 ಸಾವಿರ ಖರ್ಚು ಬರುತ್ತಿತ್ತು. ಈಗ ಎಲ್ಲವೂ ದುಬಾರಿಯಾಗಿದ್ದರಿಂದ 60ರಿಂದ 70 ಸಾವಿರ ನಿರ್ವಹಣೆ ವೆಚ್ಚವಾಗುತ್ತಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಹಾಗೂ ಬೆಳೆಗಾರರಿಗೆ ಶಾಶ್ವತವಾಗಿ ನೆರವಾಗುವ ಯೋಜನೆಗಳನ್ನು ಜಾರಿಗೊಳಿಸಬೇಕು ಎನ್ನುತ್ತಾರ ಈರುಳ್ಳಿ ಬೆಳಗಾರ ಶಿವಕುಮಾರ್.
ಕಡೂರು ಭಾಗದಲ್ಲಿ ಬೆಳೆಯುವ ಈರುಳ್ಳಿ ಮಾತ್ರವಲ್ಲ, ಆಲೂಗೆಡ್ಡೆ, ರಾಗಿ, ಮೆಕ್ಕೆಜೋಳ, ಶೇಂಗಾ ಎಲ್ಲವೂ ಹಾಳಾಗಿದೆ. ತಾಲೂಕಿನಲ್ಲಿ ಸಕಾಲಕ್ಕೆ ಮಳೆ ಬಾರದೆ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ. ಬೆಲೆ ಕುಸಿತದಿಂದ ಕೇಳೋರು ಗತಿಯಿಲ್ಲದಂತಾಗಿದೆ. ಎಪಿಎಂಸಿ ತಿದ್ದುಪಡಿ ತಂದಿದ್ದೇವೆ ಎಂದು ದೊಡ್ಡದಾಗಿ ಹೇಳಿದರು. ರೈತರ ಹೊಲಕ್ಕೆ ಬಂದು ಖರೀದಿಸುತ್ತಾರೆ, ಕೇಳಿದಷ್ಟು ರೇಟ್ ಕೊಡುತ್ತಾರೆ, ರೈತ ಸ್ವತಂತ್ರ ಎಂದೆಲ್ಲಾ ಹೇಳಿದರು. ಆದರೆ ಈವರೆಗೆ ಅಂತಹ ಯಾವ ಗಿರಾಕಿಯೂ ಬಂದಿಲ್ಲ. ಎಪಿಎಂಸಿಯವರೂ ಬೆಳೆಗಾರರತ್ತ ತಲೆ ಹಾಕಲಿಲ್ಲ. ಇದು ರೈತರ ಇವತ್ತಿನ ಪರಿಸ್ಥಿತಿ ಎನ್ನುತ್ತಾರೆ ಮಾಜಿ ಶಾಸಕ ವೈ ಎಸ್ ವಿ ದತ್ತ.




