ಭಟ್ಕಳ ವೆಂಕಟಾಪುರ ನದಿಯಲ್ಲಿ ಮೊಸಳೆ : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಕಾರವಾರ : ಭಟ್ಕಳ ತಾಲೂಕಿನ ವೆಂಕಟಾಪುರ ನದಿಯ ನೀರಕಂಠ ಸಮೀಪದಲ್ಲಿ ಮರಳಿನ ದಿಬ್ಬದ ಮೇಲೆ, ಕಳೆದ ಎರಡು ದಿನಗಳಿಂದ ಮೊಸಳೆ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಭಯ ಆವರಿಸಿದೆ.
ವೆಂಕಟಾಪುರ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಯಾಗಿದೆ. ಮಳೆಯ ರಭಸಕ್ಕೆ ಕಡವಿನಕಟ್ಟೆ ಡ್ಯಾಂನಿಂದ ಕೆಳಗಿನ ಭಾಗಕ್ಕೆ ಬಂದಿದೆ ಎಂದು ಕೆಲ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ ಮೊಸಳೆಯನ್ನು ಕಂಡ ಗ್ರಾಮಸ್ಥರು ಕಂಗಾಲಾಗಿದ್ದು ಮಾತ್ರ ಸುಳ್ಳಲ್ಲ.
ಶುಕ್ರವಾರ ಸಂಜೆಯ ವೇಳೆ ಮರಳು ದಿಬ್ಬದ ಮೇಲೆ ಮಲಗಿದ್ದ ಮೊಸಳೆಯನ್ನು ಕಂಡಿದ್ದ ಸ್ಥಳೀಯರು ಪೋಟೋ ಕ್ಲಿಕ್ಕಿಸಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಮೊಸಳೆ ಅದೇ ಮರಳು ದಿಬ್ಬದ ಮೇಲೆ ಮತ್ತೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸುಮಾರು ಆರು ಅಡಿ ಉದ್ದವಿದ್ದ ಮೊಸಳೆಯಾಗಿದ್ದು, ಈ ಹೊಳೆಯಲ್ಲಿ ಸದಾ ಜನರು ನೀರಿಗಿಳಿಯುವುದು, ಈಜುವುದು ಮಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮೊಸಳೆ ಕಾಣಿಸಿಕೊಂಡಿದ್ದನ್ನು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಕೇವಲ ಒಂದೇ ಮೊಸಳೆ ಇದೆಯೇ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಅಥವಾ ಇನ್ನೂ ಹೆಚ್ಚಿನ ಮೊಸಳೆಗಳಿವೆಯೇ ಎಂದು ತಿಳಿದು ಆ ಮೊಸಳೆಗಳನ್ನು ಪರ್ಯಾಯವಾಗಿ ಬೇರೆಡೆಗೆ ಸಾಗಿಸುವ ಅಥವಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.




