ದಾಖಲೆಗಳಿದ್ದರೂ ಮನೆ ತೆರವಿಗೆ ನೋಟಿಸ್: ಸಚಿವ ನಿರಾಣಿ ಕ್ಷೇತ್ರದ ಕುಟುಂಬಗಳ ಅತಂತ್ರ ಸ್ಥಿತಿ

ಬಾಗಲಕೋಟೆ: ಕೆರೆಗಳು ಹಳ್ಳಿ ಜನರ ಆಸರೆಗಳು. ದನಕರುಗಳಿಗೆ ಕುಡಿಯುವ ನೀರು, ಕೃಷಿಗೆ ನೀರಾವರಿ ಹೀಗೆ ವಿವಿಧ ಉದ್ದೇಶಕ್ಕಾಗಿ ನಮ್ಮ ಪೂರ್ವಜರು ಕೆರೆಗಳನ್ನು ಕಟ್ಟಿಸಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಂತೂ ಎರಡು ಎಕರೆ ಒಂಬತ್ತು ಗುಂಟೆ ಕೆರೆ ಪೂರಾ ಕಬಳಿಕೆ ಆಗಿದ್ದು, ಕೆರೆ ತುಂಬಾ ಮನೆಗಳು ತುಂಬಿಕೊಂಡಿವೆ. ಗ್ರಾಮ ಪಂಚಾಯಿತಿಯಿಂದ ಮನೆಗಳಿಗೆ ಉತಾರ ಇದ್ದು, ಮನೆಕರ ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ಆದರೀಗ ಮನೆ ತೆರವಿಗೆ ನೋಟಿಸ್ ಬಂದಿದ್ದರಿಂದ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹಲಕುರ್ಕಿ ಗ್ರಾಮದಲ್ಲಿ ಸಣ್ಣ ಕೆರೆಯೊಂದಿತ್ತು. ಕೆರೆಯ ಜಾಗದಲ್ಲಿ ಸುಮಾರು ವರ್ಷಗಳಿಂದ ಮನೆಗಳು ತಲೆ ಎತ್ತಿ ನಿಂತಿವೆ. ಸರ್ವೆ ನಂ 259 ರಲ್ಲಿನ ಎರಡು ಎಕರೆ ಒಂಬತ್ತು ಗುಂಟೆ ಸಂಪೂರ್ಣ ಒತ್ತುವರಿಯಾಗಿದ್ದು , ಮನೆಗಳನ್ನು ಕಟ್ಟಿಸಲಾಗಿದೆ. ಈಗ ಕಂದಾಯ ಇಲಾಖೆಯಿಂದ ಮನೆಗಳನ್ನು ತೆರವುಗೊಳಿಸಿ ಎಂದು ನೊಟೀಸ್ ಬಂದಿದ್ದು, ಮೂರು ತಲೆಮಾರಿನಿಂದ ಇಲ್ಲಿ ಬದುಕುತ್ತಿದ್ದೇವೆ. ನಮ್ಮ ಹೆಸರಲ್ಲಿ ಮನೆ ಉತಾರ ಇವೆ, ದಾಖಲಾತಿ ಇವೆ. ಈಗ ಮನೆ ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗಬೇಕು. ನಮ್ಮನ್ನು ಖಾಲಿ ಮಾಡಿಸಬೇಡಿ ಎಂದು ನಿವಾಸಿ ಗಂಗಮ್ಮ ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಹಲಕುರ್ಕಿ ಗ್ರಾಮದ ಕೆರೆಯ ವ್ಯಾಪ್ತಿಯಲ್ಲಿನ ನಲವತ್ತು ಮನೆಗಳಿಗೆ ಈಗ ನೊಟೀಸ್ ಜಾರಿ ಮಾಡಲಾಗಿದೆ. ಸಹಾಯಕ ನಿರ್ದೇಶಕ ಭೂಮಾಪನಾ ಇಲಾಖೆ ಬಾದಾಮಿ ಅವರ ವರದಿ ಪ್ರಕಾರ. ಭೂ ಒತ್ತುವರಿ ಆಗಿದ್ದು ಖಚಿತವಾಗಿದೆ. ಆದ್ದರಿಂದ ತಾವು ಜಾಗ ತೆರವುಗೊಳಿಸಬೇಕು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳೋದಾಗಿ ನೊಟೀಸ್ ಮೂಲಕ ತಿಳಿಸಲಾಗಿದೆ. ಇದು ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಇನ್ನು ಬಾದಾಮಿ ತಾಲ್ಲೂಕಿನಲ್ಲಿ ಹಲಕುರ್ಕಿ ಒಂದೇ ಗ್ರಾಮವಲ್ಲ. ಒಟ್ಟು ಹದಿನೆಂಟು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ.
ಕೆಲವೊಂದು ಕಡೆ ಮನೆಗಳನ್ನು ಕಟ್ಟಿದರೆ ಕೆಲ ಕಡೆ ಒತ್ತುವರಿ ಮಾಡಿ ಜಮೀನು ಮಾಡಿಕೊಳ್ಳಲಾಗಿದೆ.ಸದ್ಯ ಬಾದಾಮಿ ತಹಸೀಲ್ದಾರ ಹದಿನೆಂಟು ಕೆರೆಗೂ ಸಂಬಂಧಿಸಿದಂತೆ ಆಯಾ ಗ್ರಾಮದ ಒತ್ತುವರಿ ಮಾಡಿದ ಕೆರೆಗೆ ಸಂಬಂಧಿಸಿದಂತೆ ಒತ್ತುವರಿದಾರರಿಗೆ ನೊಟೀಸ್ ಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಬಾದಾಮಿ ತಹಸೀಲ್ದಾರ್ ಅವರನ್ನು ಕೇಳಿದರೆ,ತಾಲ್ಲೂಕಿನಲ್ಲಿ ಭೂ ಸರ್ವೆ ಮಾಡಿಸಲಾಗಿದೆ.ಆ ಪ್ರಕಾರ ಒತ್ತುವರಿ ಖಚಿತವಾಗಿದೆ. ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಬೆಂಗಳೂರು, ಬಾಗಲಕೋಟೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಒತ್ತುವರಿ ತೆರವುಗೊಳಿಸಲು ನೊಟೀಸ್ ನೀಡಲಾಗಿದೆ. ಮುಂದೆ ಕಾನೂನು ಪ್ರಕಾರ ನಮಗೆ ಏನು ನಿರ್ದೇಶನ ಬರುತ್ತೆ ಆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಸದ್ಯ ನೊಟೀಸ್ ಕೊಟ್ಟಿದ್ದೇವೆ ಎಂದು ತಹಶೀಲ್ದಾರ್ ಎಸ್ ಎಸ್ ಇಂಗಳೆ ಹೇಳಿದರು.
ಒಂದು ಕಡೆ ಕೆರೆ ಒತ್ತುವರಿಯಾಗಿ ಕಾಣೆಯಾದಂತಾಗಿದೆ. ಆದರೆ ಕೆರೆಯಲ್ಲಿ ಮನೆ ಕಟ್ಟಿಸಿಕೊಂಡವರು ತೆರವುಗೊಳಿಸಿದರೆ ಎಲ್ಲಿಗೆ ಹೋಗೋಣ ಅಂತಿದ್ದಾರೆ. ಈ ಮಧ್ಯೆ ಈ ಕೆರೆ ಒತ್ತುವರಿ ಪ್ರಕರಣ ಮುಂದೆ ಯಾವ ಹಂತಕ್ಕೆ ತಲುಪುತ್ತೆ. ಕೆರೆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಗ್ರಾಮ ಪಂಚಾಯಿತಿ ಅನುಮತಿ ಕೊಟ್ಟು ಎಡವಟ್ಟು ಮಾಡಿಕೊಂಡಿದೆ. ಬಡವರಿಗೆ ತೆರವು ನೊಟೀಸ್ ಬರಸಿಡಿಲು ಬಡಿದಂತಾಗಿದೆ. ಸರ್ಕಾರ ಕ್ಷೇತ್ರದ ಶಾಸಕ ಸಚಿವ ಮುರುಗೇಶ್ ನಿರಾಣಿ ಬಡವರಿಗೆ ನ್ಯಾಯ ಕೊಡಿಸಬೇಕಿದೆ.




