ಮೈಸೂರು
ಎರಡನೇ ಆಷಾಢ ಶುಕ್ರವಾರ; ಚಾಮುಂಡೇಶ್ವರಿಗೆ ವಿಶೇಷ ಪೂಜೆ

ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದಂದು ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಸಾಂಪ್ರದಾಯಿಕ ಆಷಾಢದ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಭಕ್ತರ ನಿಷೇಧ ಮಧ್ಯೆಯೇ ಇಂದು ದೇವಸ್ಥಾನದ ಆರ್ಚಕರು ಹಾಗೂ ಆಡಳಿತ ಮಂಡಳಿ ಸಮ್ಮುಖದಲ್ಲಿ ಚಾಮುಂಡೇಶ್ವರಿಗೆ ಬೆಳಿಗ್ಗೆ 4.30ರಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ರುದ್ರಾಭಿಷೇಕ, ಅರ್ಚನೆಯಂತಹ ಧಾರ್ಮಿಕ ಕಾರ್ಯ ನಡೆದು 7.30ಕ್ಕೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.
ಚಾಮುಂಡೇಶ್ವರಿ ತಾಯಿ ವಿಶೇಷ ಮೊಗ್ಗಿನ ಜಡೆ ಅಲಂಕಾರದಲ್ಲಿ ಅಧಿದೇವತೆ ಮಿಂಚುತ್ತಿದ್ದಳು. ಬಳಿಕ ಮಹಾಮಂಗಳಾರತಿ ನಡೆದಿದೆ. ದೇವಾಲಯ ತೆರೆದಿದ್ದರೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಸಂಜೆ 6.30ರಿಂದ ಮತ್ತೆ ವಿಶೇಷ ಅಭಿಷೇಕ ನಡೆಯಲಿದ್ದು ಬಳಿಕ ದೇವಾಲಯದ ಬಾಗಿಲು ಮುಚ್ಚಲಿದೆ.
ದೇವಾಲಯದ ಒಳಾಂಗಣದಲ್ಲಿ ಪುಷ್ಪಗಳಿಂದ ಅಲಂಕರಿಸಿ ಸಿಂಗಾರ ಮಾಡಲಾಗಿದೆ. ಚಾಮುಂಡಿ ದೇವಾಲಯದ ಒಳಾಂಗಣ ನವವಧುವಿನಂತೆ ಕಂಗೊಳಿಸುತ್ತಿದೆ.




