ಆಷಾಢ ಶುಕ್ರವಾರ, ರಜಾ ದಿನಗಳಲ್ಲಿ ಚಾಮುಂಡಿಬೆಟ್ಟ ಸೇರಿ ಪ್ರಮುಖ ದೇವಾಲಯಗಳಿಗೆ ನಿರ್ಬಂಧ

ಮೈಸೂರು: ಕೊರೋನಾ ಹಿನ್ನೆಲೆಯಲ್ಲಿ ಮೈಸೂರಿನ ಇತಿಹಾಸ ಪ್ರಸಿದ್ದ ಚಾಮುಂಡಿ ಬೆಟ್ಟ ಹಾಗೂ ಉತ್ತನಹಳ್ಳಿ ಜ್ವಾಲಾತ್ರಿಪುರ ಸುಂದರಿ ದೇವಾಲಯಗಳಿಗೆ ಆಷಾಢ ಮಾಸದ ಅಮಾವಾಸ್ಯೆಗಳು, ಶುಕ್ರವಾರಗಳು, ಚಾಮುಂಡಿ ವರ್ಧಂತಿ ಹಾಗೂ ಆಷಾಡ ಮಾಸದಲ್ಲಿ ಬರುವ ಎಲ್ಲಾ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಮಾಡಿದ್ದಾರೆ.
ಸಾರ್ವಜನಿಕರು ಈ ನಿರ್ಬಂಧಿತ ದಿನಗಳಂದು ಚಾಮುಂಡಿಬೆಟ್ಟಕ್ಕೆ ಆಗಮಿಸಬಾರದು ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಿಷೇಧಿತ ಸಮಯದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆದು ಬಂದಿರುವ ರೂಢಿ ಸಂಪ್ರದಾಯದಂತೆ, ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು ಸಿಬ್ಬಂದಿಗಳು, ಮಾತ್ರ ದೇವಾಲಯದ ಆವರಣದಲ್ಲಿ ನಡೆಸಲು ಅನುಮತಿ ನೀಡಿದೆ.
ನಿಷೇಧಿತ ಅವಧಿಯಲ್ಲಿ ಮೆಟ್ಟಿಲು ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಬರುವುದನ್ನು ಸಹ ನಿಷೇಧಿಸಲಾಗಿದೆ. ದೇವಾಲಯಗಳಲ್ಲಿ ದೇವಾಲಯದ ವತಿಯಿಂದಾಗಲಿ ಅಥವಾ ದಾನಿಗಳ ವತಿಯಿಂದಾಗಲಿ ದಾಸೋಹ, ಊಟದ ವ್ಯವಸ್ಥೆ ಮಾಡುವುದು ಅಥವಾ ಪ್ರಸಾದ ವಿತರಣೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.




