ಚಾಮುಂಡಿ ದರ್ಶನ; ಕೊರೊನಾ ನಿಯಮ ಮರೆತ ಭಕ್ತರು

ಮೈಸೂರು: ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಂಗಳವಾರವಾದ ಇಂದು ಚಾಮುಂಡಿ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹವೇ ಜಮಾಯಿಸಿರುವುದು ಆತಂಕಕ್ಕೆ ಎಡೆಮಾಡಿದೆ.
ಮಂಗಳವಾರ ಮುಂಜಾನೆಯಿಂದಲೇ ದೇವಿ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸಿದ್ದು ಸಾಮಾಜಿಕ ಅಂತರ, ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ದೇವಿಯ ದರ್ಶನಕ್ಕೆ ನಾ…ಮುಂದು ತಾ…ಮುಂದು ಎಂದು ಮುನ್ನುಗ್ಗುತ್ತಿರುವ ದೃಶ್ಯ ಕಂಡುಬಂದಿತು.
ಚಾಮುಂಡಿ ಬೆಟ್ಟದ ದೇವಾಲಯದ ಮುಂಭಾಗ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹವೇ ಜಮಾಯಿಸಿರುವ ಹಿನ್ನೆಲೆಯಲ್ಲಿ ಪೋಲಿಸರು, ಚಾಮುಂಡಿ ಬೆಟ್ಟದ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇನ್ನಾದರೂ ಈ ಬಗ್ಗೆ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗುವರೇ ಎಂದು ಕಾಯ್ದು ನೋಡಬೇಕಾಗಿದೆ. ಒಟ್ಟಾರೆ ಪೋಲಿಸರು, ಚಾಮುಂಡಿ ಬೆಟ್ಟದ ಜಿಲ್ಲಾಡಳಿತ ವೈಫಲ್ಯತೆಯನ್ನು ಎತ್ತಿ ಹಿಡಿದಿದೆ. ಭಕ್ತರು ಗುಂಪು ಗುಂಪಾಗಿ ಸೇರುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.
ಆಷಾಢ ಶುಕ್ರವಾರದಂದು ಪ್ರವೇಶವಿಲ್ಲದ ಕಾರಣ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸಿ ಸಾವಿರ ಮೆಟ್ಟಿಲಿಗೆ ಕುಂಕುಮ, ಅರಸಿನ, ಕರ್ಪೂರ ಹಚ್ಚಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿದರು. ಇನ್ನು ದೇವಾಲಯದ ಒಳಾಂಗಣದಲ್ಲಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲು ನೂಕುನುಗ್ಗಲೇ ಇತ್ತು.




