Breaking Newsಜಿಲ್ಲಾ ಸುದ್ದಿಮೈಸೂರುರಾಜಕೀಯ

ಸಂಪುಟ ವಿಸ್ತರಣೆಯಲ್ಲಿ ಮೈಸೂರು ವಿಭಾಗಕ್ಕಿಲ್ಲ ಸಚಿವ ಸ್ಥಾನ: ಉಳಿದಿರುವ ನಾಲ್ಕು ಸ್ಥಾನಗಳಲ್ಲಿ ನೀಡುವ ಭರವಸೆ

ದಯಾಶಂಕರ ಮೈಲಿ

ಮೈಸೂರು: ಹೌದು.. ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಬಿಜೆಪಿ ಹಿರಿಯ ಮತ್ತು ಕಿರಿಯ ಶಾಸಕರು ಮತ್ತು ಸಂಸದರು ಸಚಿವ ಸ್ಥಾನ ಪಡೆಯಲು ಪ್ರಯತ್ನಿಸಿದ್ದರು. ಆದರೆ ಈ ಪ್ರಯತ್ನ ಸಫಲವಾಗಿಲ್ಲ. ಇದರಿಂದ ಬಿಜೆಪಿ ಮೂಲ ನಿವಾಸಿಯಾದ ಮಾಜಿ ಸಚಿವ ಎಸ್ .ಎ. ರಾಮದಾಸ್ ಅವರಿಗೆ ಮಾತ್ರವೇ ಅಲ್ಲ. ಹಿರಿಯ ರಾಜಕಾರಣಿ, ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮತ್ತು ಪ್ರಥಮ ಬಾರಿಗೆ ಶಾಸಕರಾಗಿ ಮಂತ್ರಿಗಿರಿಗೆ ಯತ್ನಿಸಿದವರಿಗೂ ‘ಪ್ರಥಮ ಚುಂಬನಂ ದಂತ ಭಗ್ನಂ’ ಎಂಬಂತಾಗಿದೆ.

ತಮಗೆ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ರಾಮದಾಸ್ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವೇಳೆ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾಗಿರುವ ತಮ್ಮ ಅಳಿಯ ಹರ್ಷವರ್ಧನ್ ಅವರಿಗೆ ಸಚಿವ ಸ್ಥಾನ ಕೊಡಿಸಲು ಯತ್ನಿಸಿದ್ದು ಉಂಟು. ಅವರ ಯತ್ನ ಕೂಡ ಫಲ ಕೊಟ್ಟಿಲ್ಲ. ಇದರಿಂದ ಉಂಟಾಗಿರುವ ಅಸಮಾಧಾನವನ್ನು ಶ್ರೀನಿವಾಸ್ ಪ್ರಸಾದ್ ಅವರು ಹೊರ ಹಾಕದಿದ್ದರೂ ಒಳಗೆ ಬೇಸರ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ವಲಯದಲ್ಲೇ ಹೇಳಲಾಗುತ್ತಿದೆ.

ಅವರಲ್ಲದೇ ಸಚಿವ ಸ್ಥಾನಕ್ಕಾಗಿ ಹಿಂದೆ ತಮಗೆ ನೀಡಲು ಉದ್ದೇಶಿಸಿದ್ದ ನಿಗಮ,ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದ ಪ್ರಥಮ ಬಾರಿಗೆ ಆಯ್ಕೆ ಆಗಿರುವ ಮೈಸೂರು ಚಾಮರಾಜ ಕ್ಷೇತ್ರದದ ಶಾಸಕ ನಾಗೇಂದ್ರ, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕ್ಷೇತ್ರದ ನಿರಂಜನ್ ಮತ್ತು ಹಾಸನ ನಗರ ಮತ್ತು ಗ್ರಾಮಾಂತರ ಕ್ಷೇತ್ರ ಶಾಸಕ ಪ್ರೀತಂಗೌಡರಿಗೂ ಸಚಿವ ಸಿಕ್ಕಿಲ್ಲ. ಇದರಿಂದ ಅವರಿಗೂ ಸಹ ಬೇಸರವಾಗಿರುವುದು ಉಂಟು.

ಈಗಾದರೇ ಪಕ್ಷ ಕಟ್ಟುವುದು ಹೇಗೆ ?

ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ಹೇಳಿಕೊಳ್ಳುವಂಥಹ ರೀತಿಯಲ್ಲೇನು ಬಲಶಾಲಿಯಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಕ್ತಿಯುತವಾಗಿವೆ. ಅವರೆಡು ಪಕ್ಷಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಲು ಮೂರು ಜಿಲ್ಲೆಗಳಿಗೂ ಸಚಿವ ಸ್ಥಾನ ನೀಡಬೇಕಿತ್ತು. ಹೊರ ಜಿಲ್ಲೆಯವರು ಉಸ್ತುವಾರಿ ಸಚಿವರಾದರೇ ನಿರೀಕ್ಷಿತ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಸಾಧ್ಯವಾಗದು ಎಂದು ಬಿಜಿಪಿ ಮುಖಂಡ ಮಹಾದೇವಪ್ಪ ಅಳಲನ್ನು ತೋಡಿಕೊಳ್ಳುತ್ತಾರೆ. ಏತನ್ಮಧ್ಯೆ, ಶಾಸಕ ಪ್ರೀತಂಗೌಡರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಮಾಜಿ ಸಚಿವ ಎಚ್ .ಡಿ. ರೇವಣ್ಣನವರೇ ಕಾರಣ ಎಂದು ಆರೋಪಿಸಲಾಗಿದೆ.

ಉಳಿದ ನಾಲ್ಕರಲ್ಲಿ ಒಂದನ್ನಾದರೂ ಕೊಡುವ ಭರವಸೆ

ಈಗ 29 ಮಂದಿ ಸಚಿವರಾಗಿ ಪ್ರಮಾಣವಚನ ಸ್ಕೀಕರಿಸಿದ್ದಾರೆ. ಒಟ್ಟು 33 ಸಚಿವ ಸ್ಥಾನಗಳ ಪೈಕಿ ಇನ್ನೂ 4 ಸ್ಥಾನಗಳು ಉಳಿದಿವೆ. ಮುಂದಿನ ದಿನಗಳಲ್ಲಿ 4 ರ ಪೈಕಿ ಒಂದು ಸಚಿವ ಸ್ಥಾನವನ್ನಾದರೂ ಮೈಸೂರು ಜಿಲ್ಲೆಗೆ ನೀಡುವ ಭರವಸೆಯನ್ನು ಪಕ್ಷದ ರಾಜ್ಯದ ಮುಖಂಡರು ಭರವಸೆಯನ್ನು ನೀಡಿದ್ದಾರೆ. ಈ ಭರವಸೆ ನಿಜವಾದರೇ ಹಿರಿಯರಾದ ರಾಮದಾಸ್ ಅವರಿಗೆ ಸಿಗಬಹುದು.ಯುವಕರಿಗೆ ಮತ್ತು ದಲಿತ ಸಮುದಾಯಕ್ಕೆ ಪ್ರತಿನಿಧ್ಯ ನೀಡುವುದಾದರೇ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಅವರಿಗೆ ಸಿಗಬಹುದು ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.

ವಿಜಯೇಂದ್ರ ಉಸ್ತುವಾರಿ?

ಮುಂದೆ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಿ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡುವ ಚಿಂತನೆ ಪಕ್ಷದಲ್ಲಿ ಇದೆ. ಹಿಂದೆ ವಿಜಯೇಂದ್ರ ಅವರನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರ ಪುತ್ರ ಸರ್ಧಿಸಿದ್ದ ವರುಣ ಕ್ಷೇತ್ರದಿಂದ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಪಕ್ಷ ಮುಂದಾಗಿತ್ತು. ಅಂತಿಮ ಕ್ಷಣದಲ್ಲಿ ನಿಲ್ಲಸಲಿಲ್ಲ.
ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ವಿಜಯೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಿ ಮೈಸೂರು ಉಸ್ತುವಾರಿ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button