ಉಕ್ರೇನ್ನಲ್ಲಿ ಆಹಾರ ನೀರು ಇಲ್ಲದೆ ಪರದಾಡುತ್ತಿರುವ ಮೈಸೂರು ಮೂಲದ ವಿದ್ಯಾರ್ಥಿನಿ: ಸಹಾಯಕ್ಕಾಗಿ ಮನವಿ

ಮೈಸೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಾಲ್ಕನೇ ದಿನವೂ ಮುಂದುವರೆದಿದೆ. ಯುದ್ಧದಿಂದ ಸಾಕಷ್ಟು ಮಂದಿ ಕಂಗಾಲಾಗಿದ್ದು ಭಾರತದ ಸಾಕಷ್ಟು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗ್ಲೆ ಕೆಲ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಮರಳಿದ್ದು ಇನ್ನೂ ಸಾಕಷ್ಟು ಮಂದಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ಮೈಸೂರಿನ ವಿದ್ಯಾರ್ಥಿನಿಯೊಬ್ಬರು ಉಕ್ರೇನ್ನ ಬಂಕರ್ನಲ್ಲಿ ಸಿಲುಕೊಂಡಿದ್ದು ತಮ್ಮನ್ನ ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ನಗರದ ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಗಣೇಶ್ ಸಿಂಗ್ ಹಾಗೂ ಅನುರಾಧ ದಂಪತಿ ಪುತ್ರಿ ಜ್ಞಾನಶ್ರೀ ಸಿಂಗ್ ಉಕ್ರೇನ್ನ ವಿ.ಎನ್.ಖರಾಝಿಯಾನ್ ವಿವಿಯಲ್ಲಿ ಮೂರನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಉಕ್ರೇನ್ನ ಬಂಕರ್ನಲ್ಲಿ ಸಿಲುಕಿದ್ದು ತಮ್ಮನ್ನು ಬೇಗ ಸ್ಥಳಾಂತರಿಸುವಂತೆ ಎಂಬೆಸಿಗೆ ಮನವಿ ಮಾಡಿದ್ದಾರೆ.
ಮೂರು ದಿನಗಳಿಂದ ಬಂಕರ್ನಲ್ಲಿ ನಾನು ಸೇರಿ ಕೆಲವರು ಸಿಲುಕಿಕೊಂಡಿದ್ದೇವೆ. ಹೊರಗಡೆ ಬಾಂಬ್ ಬ್ಲಾಸ್ಟ್ ಆಗುತ್ತಿರುವ ಸದ್ದು ಕೇಳಿಸುತ್ತಿದೆ. ಆದರೆ ಇಲ್ಲಿ ನಮಗೆ ಸೇಫ್ಟಿ ಇದೆ ಎನ್ನುವ ಕಾರಣಕ್ಕೆ ಇಲ್ಲಿಯೇ ಅಡಗಿ ಕುಳಿತಿದ್ದೇವೆ. ನೀರು ಆಹಾರವಿಲ್ಲದೇ ಪರದಾಡುವಂತಾಗಿದೆ. ಹೊರಗಡೆ ಹೋಗಿ ಊಟ ತರಲೂ ಕೂಡ ಸಾಧ್ಯವಾಗುತ್ತಿಲ್ಲ. ವಾಯುದಾಳಿ ನಡೆಯುತ್ತಿದೆ ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
ನಾವು ಈಗಾಗಲೇ ಎಂಬೆಸಿಗೆ ಮನವಿ ಮಾಡಿದ್ದೇವೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಸ್ವಲ್ಪ ಸಮಯ ಕಾಯಿರಿ ಎಂದು ಹೇಳುತ್ತಿದ್ದಾರೆ. ಆದರೆ ಈಗ ಸ್ಥಳಾಂತರ ಮಾಡಿರುವ ವಿದ್ಯಾರ್ಥಿಗಳು ವೆಸ್ಟರ್ನ್ ಉಕ್ರೇನ್ ಭಾಗದವರು. ಅದು ಪೋಲ್ಯಾಂಡ್ ಹಾಗೂ ಇತರೆ ದೇಶಗಳ ಗಡಿ ಸಮೀಪವಿದೆ. ಆದರೆ ನಾವು ಈಸ್ಟರ್ನ್ ಉಕ್ರೇನ್ ಭಾಗದಲ್ಲಿ ಇದ್ದೇವೆ. ಇದು ರಷ್ಯಾ ದೇಶದ ಗಡಿ ಭಾಗವಾಗಿದ್ದು, ನಮ್ಮನ್ನು ಸ್ಥಳಾಂತರ ಮಾಡುವುದು ಕಷ್ಟ ಸಾಧ್ಯ ಎಂದು ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.




