ಒಕ್ಕಲಿಗರ ಸಂಘಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷ

ರಾಮನಗರ: ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳ ಚುನಾವಣೆಯಲ್ಲೂ ಬಾಲಕೃಷ್ಣ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡ ಮುಖಭಂಗ ಅನುಭವಿಸಿದ್ದಾರೆ. 35 ಚುನಾಯಿತ ನಿರ್ದೇಶಕರನ್ನು ಹೊಂದಿರುವ ಒಕ್ಕಲಿಗರ ಸಂಘದಲ್ಲಿ ತುಮಕೂರಿನ ನಿರ್ದೇಶಕ ಲೋಕೇಶ್ ನಾಗರಾಜಯ್ಯ ಮತದಾನಕ್ಕೆ ಗೈರಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಾಲಕೃಷ್ಣ ಅವರು 20 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಬಿ.ಕೆಂಚಪ್ಪಗೌಡ ಅವರಿಗೆ 14 ಮತಗಳು ಲಭಿಸಿವೆ. ಕಾರ್ಯದರ್ಶಿ ಸ್ಥಾನಕ್ಕೆ ಬಾಲಕೃಷ್ಣ ಬಣದಿಂದ ಸ್ಪರ್ಧಿಸಿದ್ದ ಕೋನಪ್ಪರೆಡ್ಡಿ ಅವರು 20 ಮತಗಳನ್ನು ಪಡೆದು ಆಯ್ಕೆಯಾಗಿದ್ದರೆ, ಕೆಂಚಪ್ಪಗೌಡರ ತಂಡದ ಹುರಿಯಾಳು ಎಚ್.ಎನ್. ಅಶೋಕ್ ಅವರು 14 ಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ.
ಎರಡು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ಬಾಲಕೃಷ್ಣ ಅವರ ತಂಡದ ಅಭ್ಯರ್ಥಿಗಳಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಮತ್ತು ಡಿ.ಹನುಮಂತಯ್ಯ ತಲಾ 20 ಮತಗಳನ್ನು ಪಡೆದು ಚುನಾಯಿತರಾದರು. ಕೆಂಚಪ್ಪಗೌಡ ತಂಡದಿಂದ ಸ್ಪರ್ಧಿಸಿದ್ದ ಎಲ್.ಶ್ರೀನಿವಾಸ್ ಮತ್ತು ಸಿ.ಜಿ.ಗಂಗಾಧರ್ ಪರಾಭವಗೊಂಡರು. ಸಹಾಯಕ ಕಾರ್ಯದರ್ಶಿ ಸ್ಥಾನದ ಚುನಾವಣೆಯಲ್ಲಿ ಬಾಲಕೃಷ್ಣ ತಂಡದ ಹುರಿಯಾಳು ರಾಘವೇಂದ್ರ ಅವರು 20 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕೆಂಚಪ್ಪಗೌಡ ತಂಡದ ಎಂ.ಬಿ.ಮಂಜೇಗೌಡ ಸೋತರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್.ಪ್ರಕಾಶ್ ಅವರು ಪ್ರತಿಸ್ಪರ್ಧಿ ಅಶೋಕ್ ಜಯರಾಮ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಬಾಲಕೃಷ್ಣ ಮತ್ತವರ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕೆಂಚಪ್ಪಗೌಡ ಅವರು ಸಿಂಡಿಕೇಟ್ ರಚಿಸಿಕೊಂಡು, ಚುನಾವಣೆ ಎದುರಿಸಿದ್ದರು. ತಾವೂ ಸೇರಿದಂತೆ 10 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಕೆಂಚಪ್ಪಗೌಡ ಸಫಲರಾಗಿದ್ದರು. ಚುನಾವಣೆ ನಿಗದಿಯಾಗುತ್ತಿದ್ದಂತೆಯೇ ನಡೆದ ರೆಸಾರ್ಟ್ ರಾಜಕಾರಣದಲ್ಲಿ ಇಬ್ಬಣಗಳಲ್ಲೂ ತಲಾ 16 ಮಂದಿ ಗುರ್ತಿಸಿಕೊಂಡಿದ್ದರು. ಪ್ರಾರಂಭದಲ್ಲಿ ತಟಸ್ಥರಾಗಿದ್ದ ಇಬ್ಬರು ಬಾಲಕೃಷ್ಣ ಬಣಕ್ಕೆ ಜಿಗಿದಿದ್ದರೆ, ಕೆಂಚಪ್ಪಗೌಡ ಅವರಿಗೆ ಜೊತೆಗಿದ್ದವರೇ ಇಬ್ಬರು ಬೆನ್ನಿಗೆ ಇರಿದಿದ್ದಾರೆ




