ಜಿಲ್ಲಾ ಸುದ್ದಿದಕ್ಷಿಣ ಕನ್ನಡ
ಪ್ರವಾಸಿ ವಿದ್ಯಾರ್ಥಿಗಳನ್ನು ತಡೆದು ಗೂಂಡಾವರ್ತನೆ : ದೂರು ದಾಖಲು

ಮಂಗಳೂರು: ದೇಗುಲವೊಂದಕ್ಕೆ ಪ್ರವಾಸ ಹೋಗಿದ್ದ ವಿದ್ಯಾರ್ಥಿಗಳನ್ನು ತಡೆದು ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಗುಂಪೊಂದು ಗೂಂಡಾಗಿರಿ ನಡೆಸಿದ್ದಾರೆ ಎಂದು ಪೂಂಜಾಲಕಟ್ಟೆ ಠಾಣೆಗೆ ನೊಂದ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
ದಕ್ಷಿಣ ಕನ್ನಡದ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆರು ವಿದ್ಯಾರ್ಥಿಗಳು ಗುರುವಾರ ಸಂಜೆ ಕಾರಿಂಜ ದೇಗುಲಕ್ಕೆ ಹೋಗಿ ಫೋಟೋ ತೆಗೆದು ಅಲ್ಲಿಂದ ವಾಪಸಾಗುತ್ತಿದ್ದಾಗ ಸಂಘ ಪರಿವಾರದವರು ಎನ್ನಲಾದ 5 ಮಂದಿಯ ತಂಡವೊಂದು ಬಂದು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ, ಹಿಂದು ಮತ್ತು ಮುಸ್ಲಿಂ ಧರ್ಮೀಯ ವಿದ್ಯಾರ್ಥಿಗಳು ಒಟ್ಟಾಗಿ ಬಂದಿದ್ದಕ್ಕೆ ಆಕ್ಷೇಪಿಸಿ, ಬೈದು ಗೂಂಡಾಗಳಂತೆ ವರ್ತಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಧಾವಿಸಿ, ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ. ತಮ್ಮನ್ನು ತಡೆದು ಗೂಂಡಾವರ್ತನೆ ತೋರಿರುವ ಐದು ಮಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.




