ಉತ್ತರ ಕನ್ನಡಜಿಲ್ಲಾ ಸುದ್ದಿ
ಕುಮಟಾದಲ್ಲಿ ನಾಯಿ ಹಿಡಿಯಲು ಹೋಗಿ ಬೋನಿನಲ್ಲಿ ಸಿಕ್ಕಿ ಬಿದ್ದ ಚಿರತೆ

ಕಾರವಾರ : ಆಹಾರ ಅರಸಿ ಬಂದಿದ್ದ ಚಿರತೆಯೊಂದು ಬೋನಿನಲ್ಲಿ ಇದ್ದ ನಾಯಿ ಹಿಡಿಯಲು ಹೋಗಿ ಬೋನಿನಲ್ಲೇ ಬಂಧಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ಇಂದು ನಡೆದಿದೆ.
ರಾತ್ರಿ ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನು ನಾಯಿ ಬೋನಿನೊಳಗೆ ಹೋದದ್ದನ್ನು ಗಮನಿಸಿದ ಮನೆಯ ಮಾಲಿಕರು ತಕ್ಷಣ ಬೋನನ್ನು ಲಾಕ್ ಮಾಡಿದ್ದಾರೆ.
ಅದೃಷ್ಟವಶಾತ್ ಬೋನಿನಲ್ಲಿ ಇದ್ದ ನಾಯಿ ತಪ್ಪಿಸಿಕೊಂಡಿದ್ದು,ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚಿರತೆ ರಕ್ಷಣೆ ಮಾಡಲು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಕಾರ್ಯಾಚರಣೆಗೆ ದೊಡ್ಡ ಸವಾಲು ಎದುರಾಗಿದ್ದು,ನಾಯಿ ಬೋನು ಹೆಚ್ಚು ಗಟ್ಟಿ ಇಲ್ಲದ ಕಾರಣ ಚಿರತೆ ದಾಳಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕುಮಟಾ ಎಸಿಎಫ್ ಅವರೊಂದಿಗೆ ನುರಿತ ತಂಡ ಈಗಾಗಲೇ ಕಿಮಾನಿ ಗ್ರಾಮಕ್ಕೆ ಆಗಮಿಸಿದ್ದು,ಚಿರತೆ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ.




