ರಾಜ್ಯ ಸರ್ಕಾರವೇ ಅಧಿಕೃತವಾಗಿ ಮನೆಗಳನ್ನು ಸಕ್ರಮಗೊಳಿಸಲಿ: ಸತೀಶ್ ಜಾರಕಿಹೊಳಿ ಸವಾಲು

ಬೆಳಗಾವಿ: 200 ರೂ. ಬಾಂಡ್ ಮೇಲೆ ಖರೀದಿ ಮಾಡಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸುವುದು 20 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಅದನ್ನು ಈಗ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಇಷ್ಟು ದಿನ ಅವರು ಏನು ಮಾಡುತ್ತಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಡ್ ಗಳ ಮೇಲೆ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸವುದು ಹೇಳಿದಷ್ಟು ಸುಲಭವಲ್ಲ. ಮನೆಗಳ ಸಕ್ರಮವನ್ನು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಮತವೂ ಬೇಕು ಎಂದರು.
ಚುನಾವಣೆ ಮುಗಿದ ಮೇಲೆ ಜನರು ಈ ಬಗ್ಗೆ ಯಾರನ್ನು ಕೇಳುವುದು? ಮುಖ್ಯಮಂತ್ರಿಗಳ ಮಟ್ಟದಲ್ಲಿ ಇದು ಚರ್ಚೆಯಾಗಬೇಕು. ಚುನಾವಣೆಗೂ ಮೊದಲೇ ರಾಜ್ಯ ಸರ್ಕಾರವೇ ಮನೆಗಳನ್ನು ಸಕ್ರಮಗೊಳಿಸುವ ಕುರಿತು ಅಧಿಕೃತವಾಗಿ ಘೋಷಿಸಲಿ ಎಂದು ಸತೀಶ ಸವಾಲು ಹಾಕಿದರು.
ಹೆಸರು ಬದಲಾಯಿಸುವುದೇ ಬಿಜೆಪಿಯವರ ಹವ್ಯಾಸ:
ಬೇರೆಯವರ ಯೋಜನೆಗಳ ಹೆಸರು ಬದಲಾಯಿಸುವುದೇ ಬಿಜೆಪಿಯವರ ಹವ್ಯಾಸ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೂ ಯುಪಿಎ ಯೋಜನೆಗಳ ಹೆಸರನ್ನೇ ಬದಲಾಯಿಸಿ, ಅವುಗಳನ್ನೇ ಮುಂದುವರೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಪಾಲಿಕೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 24×7 ಕುಡಿಯುವ ನೀರಿನ ಯೋಜನೆ, ಕಸ ಸಂಗ್ರಹಣೆ ಸೇರಿ ಬಹುತೇಕ ಎಲ್ಲ ಹಳೆಯ ಯೋಜನೆಗಳೇ ಇವೆ. ಇವರು ಹೊಸದು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಉಚಿತ ಶವಸಂಸ್ಕಾರ ರಾಜ್ಯ ಸರ್ಕಾರದ ಹಳೆಯ ಯೋಜನೆಯಾಗಿದೆ. ಕೋವಿಡ್ ನಿಂದ ಮೃತರಾದವರಿಗೆ ಉಚಿತ ಶವಸಂಸ್ಕಾರ ಮಾಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರವೇ ಕಲ್ಪಿಸಿದೆ. ಇದರಲ್ಲಿ ಹೊಸದೇನು ಇಲ್ಲ ಎಂದರು.
