ಶ್ರೀನಿವಾಸಪುರದಿಂದ ಕಿಸಾನ್ ರೈಲಿನಲ್ಲಿ ಹೋಗಿದ್ದು ಬರೋಬ್ಬರಿ 30 ಸಾವಿರ ಟನ್ ಮಾವು

ಕೋಲಾರ: ಕೋಲಾರ ಜಿಲ್ಲೆಯ ಪ್ರಪಂಚ ಪ್ರಸಿದ್ದಿ ಮಾವಿನ ನಗರಿ ಶ್ರೀನಿವಾಸಪುರದಿಂದ ಸುಮಾರು ಮೂವತ್ತು ಸಾವಿರ ಟನ್ ಮಾವಿನ ಕಾಯಿಯನ್ನು ವಿಶೇಷ ಕಿಸಾನ್ ರೈಲಿನಲ್ಲಿ ಇದುವರೆವಿಗೂ ಉತ್ತರ ಭಾರತಕ್ಕೆ ರವಾನೆ ಮಾಡಿದೆ.
ಶ್ರೀನಿವಾಸಪುರ- ಚಿಂತಾಮಣಿ ನಡುವಿನ ಪೆದ್ದನತ್ತ ರೈಲ್ವೇ ಸ್ಟೇಷನ್ ನಿಂದ ಮಾವಿನ ಕಾಯಿ ಹೊತ್ತು ಹೊರಡುವ ಕಿಸಾನ್ ರೈಲು ಇದುವರೆವಿಗೂ 12 ಬಾರಿ ಇಲ್ಲಿಂದ ಹೋಗಿದ್ದು, ಪ್ರತಿ ಭಾರಿ ಅಂದಾಜು 250 ಟನ್ ಮಾವಿನ ಕಾಯಿಯನ್ನು ಸಾಗಿಸುತ್ತಿದೆ ಎಂದು ರೈಲ್ವೇ ಸಿಬ್ಬಂದಿ ತಿಳಿಸಿದ್ದಾರೆ. ಪೆದ್ದನತ್ತ ರೈಲ್ವೇ ಸ್ಟೇಷನ್ನಿಂದ ದೆಹಲಿಯ ಆದರ್ಶ ನಗರ ರೈಲ್ವೇ ಸ್ಟೇಷನ್ ಗೆ ಹೋಗುವ ರೈಲಿನಲ್ಲಿ ಇದುವರೆವಿಗೂ ಬೆನುಷಾ(ಬೈಗುಂಪಲ್ಲಿ) ಜಾತಿಯ ಮಾವಿನ ಕಾಯಿಯನ್ನು ಮಾತ್ರ ರವಾನಿಸಿದೆ… ದೆಹಲಿಯ ಖ್ಯಾತವ್ಯಾಪಾರಸ್ಥರೊಬ್ಬರು ಕೇವಲ ಬೆನುಷಾ ಜಾತಿಯ ಮಾವನ್ನು ಹೆಚ್ಚು ಖರೀದಿಸಿ ರೈಲಿನ ಮೂಲಕ ಸಾಗಿಸುತ್ತಾರೆ.
ರೈಲಿನಲ್ಲಿ ಸಾಗಿಸಿದರೆ ಖರ್ಚು ಕಡಿಮೆ
ಶ್ರೀನಿವಾಸಪುರದಿಂದ ಉತ್ತರ ಭಾರತಕ್ಕೆ ಮಾವು ರವಾನಿಸಬೇಕಾದರೆ 10-14 ಟನ್ ಮಾವು ಸಾಗಾಣಿಕೆಗೆ ಅಂದಾಜು 1.20 ರಿಂದ 1.30 ಲಕ್ಷ ರೂಪಾಯಿ ವೆಚ್ಚವಾಗುತ್ತದೆ… ಪ್ರತಿ ಕೆಜಿಗೆ 12 ರಿಂದ 13 ರೂಪಾಯಿ ಆಗುತ್ತಿತ್ತು ಆದರೆ ರೈಲಿನಲ್ಲಿ ಸಾಗಿಸಿದರೆ ಪ್ರತಿ ಕೆಜಿಗೆ ಕೇವಲ ಮೂರು ರೂಪಾಯಿ ವೆಚ್ಚವಾಗುತ್ತದೆ ಎನ್ನುತ್ತಾರೆ.
ಮಾವು ಸಾಗಿಸುವ ರೈಲಿನಲ್ಲಿ 22 ಬೋಗಿಗಳಿದ್ದು 250 ಟನ್ ತೂಕದ ಮಾವನ್ನು ಕಾಟನ್ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ರೈಲಿಗೆ ತುಂಬಿಸಿ ಕಳುಹಿಸಲಾಗುತ್ತದೆ… ರಸ್ತೆ ಸಾರಿಗೆ ಮೂಲಕ ದೆಹಲಿಗೆ ತಲುಪಲು 4 ದಿನ ಆಗುತ್ತದೆ ಆದರೆ ಈಗ ರೈಲಿನ ಮೂಲಕ ಈಗ ಕೇವಲ 40 ಗಂಟೆಗಳ ಅವಧಿಯಲ್ಲಿ ದೆಹಲಿ ತಲುಪುತ್ತದೆ ಎನ್ನುತ್ತಾರೆ ರೈಲ್ವೇ ಅಧಿಕಾರಿಗಳು.




