ಕರ್ನಾಟಕದಲ್ಲಿ ಮೂರು ಬಿಟ್ಟವರು ಸರ್ಕಾರ ನಡೆಸುತ್ತಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

ದೇವನಹಳ್ಳಿ : ಆಗಸ್ಟ್ 26 ಕರ್ನಾಟಕ ವಿಧಾನಸಭೆಯಲ್ಲಿ ತತ್ವ ಸಿದ್ದಾಂತವಿಲ್ಲದ ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಮೂರು ಬಿಟ್ಟವರು ಸರ್ಕಾರ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ದೇವನಹಳ್ಳಿಯಲ್ಲಿ ಬಹುಜನ ಮುಕ್ತಿ ಪಾರ್ಟಿಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೇಂದ್ರ ಸರ್ಕಾರದ ರೂಪಿಸಿದ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ತಯಾರಾಗಿದ್ದು ಇಡೀ ದೇಶದಲ್ಲಿ ಒಂದೇ ಒಂದು ಸರ್ಕಾರ ಅದು ರೈತ ಪರ ಎನ್ನುತ್ತಿದ್ದ ಯಡಿಯೂರಪ್ಪ ಸರ್ಕಾರ ಅದು ರೈತ ವಿರೋಧಿಯಾದ ಭೂಸುಧಾರಣೆ ಮತ್ತು ಎಪಿಎಂಸಿ, ತಿದ್ದುಪಡಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ, ಅದಲ್ಲದೇ ಮಣ್ಣಿನ ಮಗ ಹೆಚ್ ಡಿ ಕುಮಾರಸ್ವಾಮಿ ಜಾರಿಗೆ ತಂದ ಭೂಸ್ವಾಧಿನ ಕಾಯ್ದೆಯು ಸೇರಿದಂತೆ ಇವುಗಳೆಲ್ಲವನ್ನು ಇವರುಗಳು ಮಾಡಿದ್ದು ರೈತರನ್ನು ಉದ್ದಾರ ಮಾಡುವುದಕ್ಕೆ ಅಲ್ಲ ಅವುಗಳೆಲ್ಲವೂ ಕಾರ್ಪೊರೇಟ್ ಕಂಪನಿಗಳ ಹಿತಕ್ಕಾಗಿ ರೈತರ ಪರ ಎನ್ನುವ ಈ ಮಹಾನುಭಾವರುಗಳು ಇಂತಹ ರೈತ ವಿರೋಧಿ ಕಾನೂನುಗಳನ್ನು ಮಾಡಿದರು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ದೇಶವನ್ನು ಸಂಪೂರ್ಣ ಖಾಸಗೀಕರಣ ಮಾಡಲು ಕೇಂದ್ರದ ಮೋದಿ ಸರ್ಕಾರ ತೀರ್ಮಾನ ಮಾಡಿದೆ ನಷ್ಟದಲ್ಲಿರುವ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದೇವೆ ಎನ್ನುವ ಮೋದಿ ಸರ್ಕಾರ ವಿಮಾ ಕಂಪನಿಗಳನ್ನು ಯಾಕೆ ಖಾಸಗೀಕರಣ ಮಾಡಿದೆ ವಿಮಾ ಕಂಪನಿಗಳು ನಷ್ಟದಲ್ಲಿರಲಿಲ್ಲ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರು ಜನರಿಗೆ ಸುಳ್ಳು ಹೇಳಿ ಕಾರ್ಪೊರೇಟ್ ಗಳ ಏಜೆಂಟ್ ಗಳಾಗಿ ಇವರು ಅಲ್ಲಿ ಸ್ಥಾಪಿತರಾಗಿದ್ದಾರೆ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದರೆ ಮುಂದಿನ ದಿನಗಳಲ್ಲಿ ದೆಹಲಿ ಮಾದರಿಯ ಚಳವಳಿಯನ್ನು ಕರ್ನಾಟಕದಲ್ಲಿಯೂ ರೂಪಿಸುತ್ತೇವೆ ಅದಕ್ಕಾಗಿ ಈಗ ಎಲ್ಲ ಕಡೆಗಳಲ್ಲಿ ಪ್ರವಾಸ ಕೈಗೊಂಡು ರೈತರನ್ನು ಎಚ್ಚರಿಸಿ ಪೂರ್ವತಯಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
