
ಜಿ.ಮುಮ್ತಾಜ್ ಅಲೀಮ್
ಗತಿಸಿಹೋದ ಇತಿಹಾಸವನ್ನು ಮತ್ತೆ ಕೆದಕಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ವಿಭಜನೆ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ವರ್ಷ ಆಗಸ್ಟ್ 14 ರಂದು “ವಿಭೀಷಣ ವಿಭೀಷಿಕ ಸ್ಮರಣ ದಿನ” ಅಂದರೆ ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದೆ.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಬಿಜೆಪಿ ಅಥವಾ ಸಂಘಪರಿವಾರದ ಯಾವುದೇ ಕೊಡುಗೆ ಅಥವಾ ಯೋಗದಾನ ಇರಲಿಲ್ಲ. ಹೀಗಾಗಿ ದ್ವೇಷದ ರಾಜಕೀಯದ ಹಿನ್ನೆಲೆಯಲ್ಲಿ ದೇಶ ವಿಭಜನೆ ಕಹಿ ನೆನಪನ್ನು ಅಥವಾ ಒಣಗಿರುವ ಗಾಯಗಳನ್ನು ಮತ್ತೆ ಕೆರೆದು ಹಸಿಗೊಳಿಸುವ ಮೂಲಕ ತಮ್ಮ ಮೈಕಾಯಿಸಿಕೊಳ್ಳುವ ಪ್ರಯತ್ನ ಇದರ ಹಿಂದಿದೆ ಎನ್ನಲಾಗುತ್ತಿದೆ.
ಇದು ದೀರ್ಘಾವಧಿ ಯೋಜನೆಯಾದರೆ, ಅಲ್ಪಾವಧಿಯಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಜನರ ನಡುವೆ ಈಗಾಗಲೇ ನೆಡಲಾಗಿರುವ ದ್ವೇಷದ ಬೀಜವನ್ನು ಇನ್ನಷ್ಟು ಪಸರಿಸಿ, ಗಟ್ಟಿಗೊಳಿಸಿ ರಾಜಕೀಯ ದುರ್ಲಾಭ ಪಡೆಯುವ ವ್ಯವಸ್ಥಿತ ಸಂಚು ಇದರ ಹಿಂದಿದೆ ಎಂಬ ಮಾತೂ ಕೇಳಿಬರುತ್ತಿದೆ.
ಪ್ರಸ್ತುತ ದೇಶದ ರಾಜಕೀಯ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ನೋಡುವುದಾದರೆ ಹಳೆಯ ಗಾಯವನ್ನು ಕೆದಕುವ ಮೂಲಕ ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಬಗ್ಗುಬಡಿಯುವ ಪ್ರಯತ್ನವೂ ಇದರ ಹಿಂದಿರುವುದನ್ನು ಅಲ್ಲಗೆಳೆಯಲಾಗದು.
ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬುದೇನೋ ನಿಜ. ಆದರೆ ಅದರ ಬಳಕೆಯ ಪರಿ ಮತ್ತು ರೀತಿ-ನೀತಿ ಯಾವುದು ಎಂಬುದು ಅತಿಮುಖ್ಯ. ಹಾಗೆ ನೋಡಿದರೆ ವಿಶ್ವಚರಿತ್ರೆಯಲ್ಲಿ ಎರಡನೇ ಮಹಾಯುದ್ಧದ ನಂತರ ಜರುಗಿದ ಭಾರತ ದೇಶದ ವಿಭಜನೆ ಎಂಬುದು ಇಪ್ಪತ್ತನೇ ಶತಮಾನದ ಅತಿದೊಡ್ಡ ಕಹಿ ನೆನಪು. ಪ್ರಪಂಚದ ಸಾಮೂಹಿಕ ವಲಸೆ ಘಟನೆಗಳ ಪೈಕಿ ಎದ್ದುಕಾಣುವಂತಹ ಪ್ರಮುಖ ಮಜಲು. ಮಾಯವಾಗದ ಗಾಯ. ಸರಿಸುಮಾರು ಎರಡೂವರೆ ಕೋಟಿಗೂ ಅಧಿಕ ಜನ ವಿಭಜನೆ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ಯಾತನೆಗೀಡಾದರು. ಈ ಪೈಕಿ ಕನಿಷ್ಠ 5 ರಿಂದ 20ಲಕ್ಷ ಜನ ಭುಗಿಲೆದ್ದ ಗಲಭೆ, ದಂಗೆ ಮತ್ತು ಹಿಂಸಾಚಾರಗಳಿಗೆ ಸಿಲುಕಿ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡರು. ಹೀಗೆ ಸಾವನ್ನಪ್ಪಿದವರಲ್ಲಿ ಹಿಂದೂ, ಮುಸ್ಲಿಂ, ಸಿಖ್ ಎಲ್ಲಾ ಜನಸಮುದಾಯದವರೂ ಇದ್ದರು.
ಪ್ರಸ್ತುತ ಮೋದಿ ಸರ್ಕಾರ ಇತಿಹಾಸ ಮರುಕಳಿಸಬಾರದು ಎಂಬ ಸದುದ್ದೇಶದಿಂದ ಇತಿಹಾಸವನ್ನು ಮತ್ತೆ ನೆನೆಸುವ ಕಾರ್ಯಕ್ಕೆ ಕೈಹಾಕಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಮೋದಿ ಮತ್ತು ಅವರು ಪ್ರತಿನಿಧಿಸುವ ಕೇಸರಿ ಪಕ್ಷ ಮತ್ತು ಸಂಘಪರಿವಾರದ ಈವರೆಗಿನ ಕಾರ್ಯಪ್ರಣಾಳಿಕೆ ಹಾಗೂ ಚಟುವಟಿಕೆಗಳನ್ನು ಗಮನಿಸಿದರೆ ಸದ್ದುದ್ದೇಶದ ಬದಲು ದುರುದ್ದೇಶವೇ ಎದ್ದು ಕಾಣುವಂತಿದೆ.
ಇದಕ್ಕೆ ಪುರಾವೆಯಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥರ ಟ್ವೀಟ್ನ್ನು ಗಮನಿಸಬಹುದು. “ಧಾರ್ಮಿಕ ಭಯೋತ್ಪಾದಕರ ಅನಾರೋಗ್ಯ ಮತ್ತು ಅಸಹ್ಯಕರ ಮನಃಸ್ಥಿತಿಯಿಂದಾಗಿ, ಭಾರತ ಭೂಮಿಯ ದುಃಖದ ವಿಭಜನೆಯಾಯಿತು.” ಇಲ್ಲಿ ನಾವು ಗಮನಿಸಬೇಕಾದ್ದೇನೆಂದರೆ ಧಾರ್ಮಿಕ ಭಯೋತ್ಪಾದಕರು ಅಂದರೆ ಯಾರು? ಸಾಕಷ್ಟು ಪರ್ಯಾಲೊಚಿಸಿಯೇ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ ಎನಿಸುತ್ತದೆ.
ಅತಿಮುಖ್ಯವಾಗಿ ಇಲ್ಲಿ ದೇಶ ವಿಭಜನೆಗೆ ಕೇವಲ ಒಂದು ಧರ್ಮ ಅಥವಾ ಮತದ ಕಡೆ ಬೊಟ್ಟು ಮಾಡುವ ಹುನ್ನಾರವಿದೆ. ವಾಸ್ತವವಾಗಿ ವಿಭಜನೆ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್ಖರ ಸಮಾನ ಭಾಗೀದಾರಿಕೆ ಇತ್ತು ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ರಾಜಕೀಯ ಕಿಚ್ಚಿಗೆ ಸಿಲುಕಿ ಮೂರೂ ಸಮುದಾಯದ ಮಂದಿ ಪರಸ್ಪರ ಒಬ್ಬರಿಗೊಬ್ಬರು ಬಡಿದಾಡಿ ಲಕ್ಷಾಂತರ ಮಂದಿ ಪ್ರಾಣಕಳೆದುಕೊಂಡಿದ್ದಾರೆ.
ದೇಶ ವಿಭಜನೆಗೆ ಸಂಬಂಧಿಸಿದಂತೆ ಸಂಘಪರಿವಾರದ ನೀತಿ-ನಿಲುವು ಮತ್ತು ವ್ಯಾಖ್ಯಾನಗಳೇ ಬೇರೆ. ಅದರಲ್ಲಿ ಯಾವುದು ಹೊಸದೇನೂ ಅಲ್ಲ. ದೇಶ ವಿಭಜನೆಗೆ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಮುಹಮ್ಮದ್ ಅಲಿ ಜಿನ್ನಾ ಮತ್ತು ಕಾಂಗ್ರೆಸ್ ಪಕ್ಷವನ್ನು ‘ದೋಷಿ’ ಸ್ಥಾನದಲ್ಲಿ ಸಂಘಪರಿವಾರ ನೋಡುತ್ತಾ ಮತ್ತು ವ್ಯಾಖ್ಯಾನಿಸುತ್ತಾ ಹಾಗೂ ಕಟಕಟೆಯಲ್ಲಿ ನಿಲ್ಲಿಸುತ್ತಾ ಬಂದಿದೆ. ಸಂಘದ ಪ್ರಮುಖ ಚಿಂತಕರೆನಿಸಿದ ಸಾರ್ವರ್‍ಕರ್, ಗೋಳ್ವಾಲ್ಕರ್ ಮತ್ತು ಹಿಂದೂ ಮಹಾಸಭಾದ ಸಾಂಪ್ರದಾಯಿಕ ಅಭಿಯಾನದ ಬಗ್ಗೆ ಸಂಘಪರಿವಾರ ಎಂದೂ ಚಕಾರ ಎತ್ತಿಲ್ಲ.
ವಾಸ್ತವವಾಗಿ ದೇಶವಿಭಜನೆಗೆ ಮಹಮ್ಮದ್ ಅಲಿ ಜಿನ್ನಾಗೂ ಮೊದಲೇ ಲಾಲಲಜ್ಪತ್ ರಾಯ್, ವಿನಾಯಕ ದಾಮೋದರ ಸಾವರ್ಕರ್, ಹಿಂದೂ ಮಹಾಸಭಾ ವಿಭಜನೆಯನ್ನು ಪ್ರತ್ಯೇಕ್ಷ ಅಥವಾ ಪರೋಕ್ಷವಾಗಿ ಸಮರ್ಥಿಸಿದ್ದರು. ಜಿನ್ನಾ ಕೂಡ ಆರಂಭದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಸ್ವಾಯತ್ತ ರಾಜ್ಯಗಳ ಬೇಡಿಕೆಯನ್ನಿಟ್ಟು ನಂತರ ವಿಭಜನೆ ಪರವಾಗಿ ವಾಲಿದ್ದರು ಎಂಬ ಸತ್ಯವನ್ನು ನಿರಾಕರಿಸುವಂತಿಲ್ಲ.
ಸಮಾಜವನ್ನು ಒಡೆದಾಳುವುದೇ ಅಜೆಂಡಾ
ಅತಿ ಮುಖ್ಯವಾಗಿ ವಿಭಜನೆಯ ನೆನಪಿನ ಹಿಂದೆ ಅತಿಪ್ರಮುಖವಾಗಿ ಸಮಾಜದಲ್ಲಿ ದ್ವೇಷವನ್ನು ಹರಡಿಸುವ ಉದ್ದೇಶ ಬಿಟ್ಟರೆ ಮಹತ್ವದ್ದೇನೂ ಕಂಡುಬರುತ್ತಿಲ್ಲ. ಮಹಾತ್ಮ ಗಾಂಧೀಜಿಯನ್ನು ಕೊಲ್ಲುವ ಮುನ್ನ ಗೋಡ್ಸೆ ಗಾಂಧೀಜಿ ದೇಶವಿಭಜನೆಯ ದೋಷಿ ಎಂದೇ ಹೇಳಿದ್ದನು. ಅನೇಕ ಬಾರಿ ನೆಹರೂ ಅವರೇ ದೇಶವಿಭಜನೆಗೆ ಕಾರಣ ಎನ್ನಲಾಗುತ್ತದೆ. ಮುಸ್ಲಿಮ್ ಸಮುದಾಯವನ್ನು ಪ್ರತ್ಯೇಕತಾವಾದಿ ಸಮುದಾಯ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತವೆ.
ದ್ವೇಷದ ಬದಲಾಗಿ ಸಮಾಜದಲ್ಲಿ ಸರ್ವ ಸಮುದಾಯಗಳ ನಡುವೆ ಭ್ರಾತೃತ್ವ ಮತ್ತು ಏಕತೆ ಹೆಚ್ಚಿಸುವ ಪ್ರಯತ್ನವೇ ಆಗಿದ್ದರೆ ನಿಶ್ಚಿತ ರೂಪದಲ್ಲಿ ವಿಭಜನೆಯ ಪರಿಣಾಮದಿಂದ ಸಂತ್ರಸ್ತರು ಅನುಭವಿಸಿದ ಯಮಯಾತನೆಗಳು ಮತ್ತು ಇಂತಹ ಯಾತನೆಗಳು ಮಾನವ ಸಮಾಜದಲ್ಲಿ ಇನ್ನೆಂದಿಗೂ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಆಗಸ್ಟ್ 14ರ ದಿನವನ್ನು ಸ್ಮರಣಾ ದಿನವನ್ನಾಗಿಸಿದರೆ ಅದು ಅರ್ಥಪೂರ್ಣ. ಬದಲಾಗಿ ರಾಜಕೀಯ ದಾಳವಾಗಿ ಯಾರನ್ನೋ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಜನರ ಭಾವನೆಗಳನ್ನು ಕರೆಳಿಸುವ ರಾಜಕೀಯ ಲಾಭ ಪಡೆಯುವುದೇ ಉದ್ದೇಶವಾದರೆ ಅದು ಕುತಂತ್ರ ಎನ್ನದೇ ವಿಧಿಯಿಲ್ಲ.
ದೇಶ ವಿಭಜನೆಗೆ ಅಸಲಿ ಕಾರಣ
ಹಾಗೆ ನೋಡಿದರೆ ದೇಶ ವಿಭಜನೆಗೆ ಬ್ರಿಟಿಷರ ಒಡೆದಾಳುವ ನೀತಿ ಪ್ರಮುಖ ಕಾರಣ. ಜತೆಗೆ ಹಿಂದೂ ಮತ್ತು ಮುಸ್ಲಿಮರ ಸಾಂಪ್ರದಾಯಿಕತೆ ಅಥವಾ ಮೂಲಭೂತವಾದಗಳು ಕಾರಣ ಎಂದೆನ್ನಬಹುದು. ಈ ಮೂರು ಅಂಶಗಳು ಪರಸ್ಪರ ಮಿಶ್ರಣಗೊಂಡಿದ್ದರ ಪರಿಣಾಮ ದೇಶ ವಿಭಜನೆಯ ಭಾರಿ ಬೆಲೆ ತೆರಬೇಕಾದ ಅನಿವಾರ್ಯತೆ ಅಥವಾ ವಾತಾವರಣ ಏರ್ಪಟ್ಟಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇವತ್ತು ದಿಲ್ಲಿ ದರ್ಬಾರಿನ ಅಧಿಕಾರದ ಗಾದಿಯಲ್ಲಿ ವಿರಾಜಮಾನರಾಗಿರುವ ಜನರ ಪೂರ್ವಜರೇ ದೇಶ ವಿಭಜನೆಯ ಯಮಯಾತನೆಯ ಹಿಂದಿನ ರೂವಾರಿಗಳು ಎಂಬುದು ಗಮನಾರ್ಹ ಅಂಶ. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಜನರು ಇಂಗ್ಲಿಷರ ಜತೆ ಕೈಜೋಡಿಸಿದ್ದರೇ ವಿನಃ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಪಾತ್ರ ಶೂನ್ಯ ಎಂಬುದನ್ನು ಇತಿಹಾಸ ಸಾರಿ ಸಾರಿ ಹೇಳುತ್ತಿದೆ. ಆದರೂ ಅವರ ಬಗ್ಗೆ ಈಗಿನ ಇವರಿಗೆ ಹೆಮ್ಮೆಯ ಕುರುಡು ಪ್ರೇಮವಿದೆಯೇ ಹೊರತು ಅವರಲ್ಲಿ ಇವರಿಗೆ ಯಾವುದೇ ತಪ್ಪು ಕಾಣದು!
ಸಂಘಪರಿವಾರಕ್ಕೆ ಆದರ್ಶಪ್ರಾಯವಾದ ಗೋಳ್ವಾಲ್ಕರ್ ಬರೆದ ಪುಸ್ತಕವೊಂದರಲ್ಲಿ ತಾವು ಜರ್ಮನಿಯ ಅಡಾಲ್ಫ್ ಹಿಟ್ಲರ್ನ ಹೆಜ್ಜೆಗನುಗುಣವಾಗಿ ನಡೆಯುವ ಕುರಿತು ಸ್ಪಷ್ಟ ಉಲ್ಲೇಖವಿದೆ. ಸಂಘಿಗಳು ಇದನ್ನು ನಿರಾಕರಿಸಿಲ್ಲ. ಇಂತಹವರು ಅಧಿಕಾರದಲ್ಲಿ ಕುಳಿತು ರೂಪಿಸುವ ನೀತಿ-ನಿರೂಪಣೆ ಮತ್ತು ಕಾರ್ಯಕ್ರಮಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂಬ ಮಾತು ಪ್ರಾಜ್ಞವಲಯದಲ್ಲಿದೆ.
ಅಲ್ಪಸಂಖ್ಯಾತರನ್ನು ಅಪರಾಧಿಗಳನ್ನಾಗಿಸುವ ಯತ್ನ
ಸ್ವಾತಂತ್ರ್ಯ ಪೂರ್ವದ ದೇಶದ ವಿಭಜನೆ ಸ್ಮರಿಸುವುದಿರಲಿ ವರ್ತಮಾನದ ವಿಭಜನಾ ರಾಜಕಾರಣವನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಹಿಂದುತ್ವದ ರಾಜಕಾರಣದ ಹೆಸರಿನಲ್ಲಿ ಬಹುಸಂಖ್ಯಾತ ಸಮುದಾಯವನ್ನು ನಿರ್ದಿಷ್ಠ ಅಲ್ಪಸಂಖ್ಯಾತ ಜನಸಮುದಾಯದ ವಿರುದ್ಧ ವ್ಯವಸ್ಥಿತವಾಗಿ ಎತ್ತಿ ಕಟ್ಟಲಾಗುತ್ತದೆ. ಜತೆಗೆ ಚುನಾವಣಾ ಕಾರಣಕ್ಕಾಗಿ ಮಗುವನ್ನು ಚಿವುಟುವುದು, ತೊಟ್ಟಿಲನ್ನು ತೂಗುವ ಕೆಲಸವನ್ನು ಸಂಘದ ಪ್ರಮುಖರೇ ಮಾಡುತ್ತಿರುವುದಕ್ಕೆ ಮಾಬ್ ಲಿಂಚಿಂಗ್ ತಪ್ಪು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಯುಪಿಯ ಮುಸ್ಲಿಂ ಸಮಾವೇಶವೊಂದರಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಯೇ ಸಾಕ್ಷಿ.
ಮಹತ್ವವನ್ನು ಗೌಣವಾಗಿಸುವ ದುರುದ್ದೇಶ
ಸಂಘದ ಪ್ರಯೋಗಗಳನ್ನು ಅರ್ಥ ಮಾಡಿಕೊಳ್ಳಲು ಭಾರಿ ಬೌದ್ಧಿಕ ಪ್ರೌಢಿಮೆಯ ಅಥವಾ ಮೇಧಾವಿತನದ ಅಗತ್ಯವಿಲ್ಲ. ಡಿಸೆಂಬರ್ 6ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದೇ ಬಾಬರಿ ಮಸೀದಿಯನ್ನು ನಾಶ ಮಾಡಲಾಗುತ್ತದೆ ಅಂದರೆ ಪರಿನಿರ್ವಾಣ ದಿನದ ಮಹತ್ವವನ್ನು ಗೌಣವಾಗಿಸುವ ಪ್ರಯತ್ನ ನಡೆಯುತ್ತದೆ.
ಅಂತೆಯೇ ಆಗಸ್ಟ್ 15ಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಅದನ್ನು ಮಸಕುಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 14ನ್ನು ವಿಭಜನೆಯ ಭಯಾನಕ ದಿನವನ್ನಾಗಿ ಆಚರಿಸಬೇಕು ಎಂದು ಮೋದಿ ಸರ್ಕಾರ ಘೋಷಿಸಿದೆ. ಅದೇ ರೀತಿ ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು ಹಾಗೂ ಆಗಸ್ಟ್ 9ರ ಚಲೇಜಾವ್
ಚಳವಳಿ ದಿನಗಳ ಬದಲಾಗಿ ಹೊಸ ಆಚರಣೆಗಳು ಜಾರಿಗೊಂಡರೆ ಅಚ್ಚರಿಪಡುವಂತಹದ್ದೇನೂ ಇಲ್ಲ.
ಈ ನಿಟ್ಟಿನಲ್ಲಿ ಆಗಸ್ಟ್ 5ನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಲು ಬೇಕಾದ ಎಲ್ಲಾ ಸಿದ್ಧತೆಗಳು ನಡೆದಿವೆ. ಏಕೆಂದರೆ ಆಗಸ್ಟ್ 5ರಂದೇ ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಗೆ ಚರಮಗೀತೆ ಹಾಡಲಾಯಿತು. ಅಯೋಧ್ಯೆಯ ರಾಮಮಂದಿರದ ಶಿಲಾನ್ಯಾಸವೂ ಅದೇ ದಿನ ಜರುಗಿತು. ಕಾಕಾತಾಳೀಯವಾಗಿ ಆಗಸ್ಟ್ 5ರಂದೇ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತದ ಹಾಕಿ ತಂಡ ವಿಜಯಮಾಲೆ ತನ್ನದಾಗಿಸಿಕೊಂಡಿದೆ. ಈ ನೆಪದಲ್ಲಿ ಆಗಸ್ಟ್ 5 ಮುಂದೊಂದು ದಿನ ರಾಷ್ಟ್ರೀಯ ದಿನವಾಗಿ ಪರಿವರ್ತಿತಗೊಳ್ಳಬಹುದು.
ಅಂದರೆ ಫ್ಯಾಸಿಸ್ಟ್ ರಾಜಕಾರಣದ ಸ್ವರೂಪವೇ ಇಂತಹದ್ದು. ಕೆಲವು ಪ್ರಯೋಗ, ಪ್ರತೀಕಗಳ ಮೂಲಕ ಜನಮಾಸದಲ್ಲಿ ಇದೇ ಸತ್ಯ ಎಂದು ಬಿಂಬಿಸಿ ಅದನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದರ ಹಿಂದಿನ ಹುನ್ನಾರವನ್ನು ಜನ ಸಾಮಾನ್ಯರಿಗೆ ಅರ್ಥ ಮಾಡಿಸುವ ಕೆಲಸವಾಗಬೇಕಿದೆ.
ಚುನಾವಣೆ ಮತ್ತು ಉನ್ಮಾದ
ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಕಳೆದ ವರ್ಷಗಳ ರಾಜಕೀಯ ಇತಿಹಾಸ ಗಮನಿಸುವುದಾದರೆ ದೇಶದ ಪ್ರತಿ ಪ್ರಮುಖ ಚುನಾವಣೆಗೂ ಮುನ್ನ ಸಮಾಜದಲ್ಲಿ ದ್ವೇಷ ಮತ್ತು ಉನ್ಮಾದವನ್ನು ಹೆಚ್ಚಿಸುವ ಕೆಲಸ ನಡೆಯುತ್ತಾ ಬಂದಿದೆ. ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದಾರು ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಇವುಗಳ ಫಲಿತಾಂಶ 2024ರ ಮಹಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗಾದಿಗೇರಲಿದೆ ಎಂಬುದನ್ನು ನಿರ್ಧರಿಸಲಿದೆ.
ಇದಕ್ಕೂ ಮುನ್ನ ಸಮಾಜದಲ್ಲಿ ದ್ವೇಷ ಮತ್ತು ಮತೋನ್ಮಾದ ಹರಡಿ ಹಿಂಸೆಗೆ ಇಂಬು ನೀಡುವ ರಹಸ್ಯ ಕಾರ್ಯಸೂಚಿಗಳಿರುತ್ತವೆ. ಇಂತಹ ಕಾರ್ಯಸೂಚಿಗೆ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆ ಅಪವಾದವಾಗಿ ಪರಿಣಮಿಸಿತು. ಇದರಿಂದ ಎಚ್ಚೆತ್ತ ಕೇಸರಿ ಪಡೆ ತಾನು ಅನುಸರಿಸಿದ ಹಳೆಯ ಮಾದರಿಗಳಿಂದ ಪ್ರಯೋಜನವಿಲ್ಲ ಎಂದು ಭಾವಿಸಿ ಹೊಸದಾಗಿ ದೊಡ್ಡ ಮಟ್ಟದ ಕಾರ್ಯಜಾಲಕ್ಕೆ ಅಣಿಯಾಯಿತು.
ಪರಿಣಾಮವಾಗಿ ಆಗಸ್ಟ್ 14ನ್ನು ಮುಂದಿಟ್ಟುಕೊಂಡು ವಿಭಜನೆಯ ಭಯಾನಕ ದಿನಾಚರಣೆ ನೆಪದಲ್ಲಿ ಸಮಾಜದಲ್ಲಿ ಭಯ ಬಿತ್ತುವ ಭಯಾನಕ ಐಡಿಯಾ ರೂಪಿಸಿ ಅದನ್ನು ಪರಿಪಾಲಿಸಲು ಮೋದಿ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಈ ಮೂಲಕ ಕೇಸರಿಪಡೆಯ ತಳಮಟ್ಟದ ಕೊನೆಯ ಕಾರ್ಯಕರ್ತರವರೆಗೂ ಸಂದೇಶ ರವಾನಿಸಿ ಅವರನ್ನು ಉತ್ತೇಜಿಸುವ ಪ್ಲಾನ್ ಇದರ ಹಿಂದೆ ಕೆಲಸ ಮಾಡಿದೆ ಎಂದೂ ಗ್ರಹಿಸಲಾಗಿದೆ.
ಇದೇನೆ ಇದ್ದರೂ ಒಟ್ಟಾರೆ ಗಮನಿಸಬೇಕಾದ ಅಂಶ ಏನೆಂದರೆ ತತ್ಕಾಲದ ರಾಜಕೀಯ ಲಾಭಕ್ಕಾಗಿ ದ್ವೇಷಭಾವದ ಕುಲುಮೆಯಲ್ಲಿ ನಮ್ಮ ನವ ಪೀಳಿಗೆಯನ್ನು ತಳ್ಳುವುದು ಎಷ್ಟು ಸರಿ? ಇದು ಎಲ್ಲಿವರೆಗೆ ಮತ್ತು ಯಾಕೆ? ಇದರಿಂದ ದೇಶಕ್ಕಾಗುವ ಪ್ರಯೋಜನವೇನು? ಇದರ ಅಂತ್ಯ ಯಾವುದು? ಎಂಬುದು ಚಿಂತನೆಯ ವಿಷಯ. ನಮ್ಮ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಧರ್ಮನಿರಪೇಕ್ಷತೆ ಎಂಬುದು ನಿಜಾರ್ಥದಲ್ಲಿ ಸಾಕಾರಗೊಳ್ಳಬೇಕು. ಆದರೆ ಇಲ್ಲಾಗುತ್ತಿರುವುದು ಇದಕ್ಕೆ ವ್ಯತಿರಿಕ್ತವಾದ ಅಪಾಯಕಾರಿ ನಡೆ. ಇದು ಹೀಗೆ ನಡೆದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸದು.



