ಕೊಡಗು

ಒಕ್ಕಲೆಬ್ಬಿಸಿ 18 ಎಕರೆ ಪೈಸಾರಿ ಜಾಗ ಒತ್ತುವರಿ; ಜಾಗ ತೆರವಿಗಾಗಿ ಆದಿವಾಸಿಗಳ ಧರಣಿ

ಮಡಿಕೇರಿ: ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿ ಕೆ. ಬಾಡಗ ಗ್ರಾಮದ ಈಚಿಮಾಡು ಪೈಸಾರಿಯಲ್ಲಿ ಅತಿ ಕ್ರಮಣವಾಗಿರುವ 18 ಎಕರೆ ಜಾಗವನ್ನು ತೆರವುಗೊಳಿಸಿ ಆದಿವಾಸಿಗಳಿಗೆ ಸೂರು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ವಿರಾಜಪೇಟೆ ತಾಲ್ಲೂಕು ಆದಿವಾಸಿಗಳ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ.

ಧರಣಿ ನಿರತರ ಪೈಕಿ ಕೆಲವರು ಪೈಸಾರಿಯ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡು ಹಾಗೂ ಕೆಲವರು ಪಾಳುಬಿದ್ದಿರುವ ಮನೆಯೊಳಗೆ ಸೇರಿಕೊಂಡು ಸೂರು ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.

ಈಚುಮಾಡು ಪೈಸಾರಿಯಲ್ಲಿ 18 ಎಕರೆ ಪೈಸಾರಿ ಜಾಗವಿದ್ದು ಕಳೆದ 10-20 ವರ್ಷಗಳ ಹಿಂದೆ ಪಂಚಾಯತಿಯಿಂದ ಐದಾರು ಮನೆಗಳನ್ನು ನಿರ್ಮಿಸಿ ಬಡ ಆದಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಹೀಗಾಗಿ ಆದಿವಾಸಿಗಳ ಹೆಸರಿನಲ್ಲಿಯೇ ರಸ್ತೆ, ವಿದ್ಯುತ್, ನೀರು ಹಾಗೂ ಮತ್ತಿತರ ಮೂಲಭೂತ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಆದರೆ ಇದನ್ನು ಸಹಿಸದ ಸುತ್ತಮುತ್ತಲಿನ ಸ್ಥಳೀಯ ಪ್ರಭಾವಿಗಳು ಈ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇವರಿಂದ ಸೂರು ಕಳೆದುಕೊಂಡವರು ಹಾಗೂ ಇನ್ನುಳಿದ ವಸತಿಹೀನರು ಒಂದೆಡೆ ಸುತ್ತಮುತ್ತಲಿನ ತೋಟಗಳಲ್ಲಿ ಕಾರ್ಮಿಕರಾಗಿ ಲೈನ್ ಮನೆಯಲ್ಲಿ ಮತ್ತು ಇನ್ನೂ ಕೆಲವರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಕೆಲವರು ಬೀದಿಪಾಲಾಗಿದ್ದರೆ, ಇನ್ನೊಂದೆಡೆ ಪೈಸಾರಿಯಲ್ಲಿನ ಮನೆಗಳು ಕಾಡು ಪಾಲಾಗಿವೆ.

ವಸತಿ ಕಲ್ಪಿಸಿ ಕೊಡಿ ಎಂಬ ಬೇಡಿಕೆಗೆ ಇನ್ನೂ ಕೂಡ ಮನ್ನಣೆ ದೊರೆಯದ ಕಾರಣ ಮಂಗಳವಾರ ಆದಿವಾಸಿಗಳು, ತಮ್ಮ ಸಂಘಟನೆಯಾದ ವೀರಾಜಪೇಟೆ ತಾಲ್ಲೂಕು, ಕೆ. ಬಾಡಗ ಆದಿವಾಸಿಗಳ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಈಚುಮಾಡು ಪೈಸಾರಿಯಲ್ಲಿ ಪ್ರತಿಭಟನೆಗೆ ಇಳಿದರು. ಕೆಲವರು ಪೈಸಾರಿಯ ಜಾಗದಲ್ಲಿ ಮನೆಗಾಗಿ ಸ್ಥಳ ಗುರುತಿಸಿಕೊಂಡು ಟೆಂಟ್ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ಖಾಲಿಯರುವ ಮನೆಯೊಳಗೆ ಸೇರಿಕೊಳ್ಳುವ ಮೂಲಕ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಇವರ ಪೈಕಿ 23 ಆದಿವಾಸಿ ಕುಟುಂಬಗಳ ಅಂದಾಜು 100ಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಇವರಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿ ವಯಸ್ಸಿನವರೂ ಇದ್ದಾರೆ. ಇನ್ನಾದರೂ ಶಾಶ್ವತವಾಗಿ ನೆಲೆಯೂರಲು ವಾಸಯೋಗ್ಯ ಮನೆ ದೊರೆಯಲಿ ಎಂಬುದು ಇವರೆಲ್ಲರ ಆಶಯವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button