ಕೊಡಗು

10 ರೂ.ಗೆ 40 ಕಿ.ಮೀ. ಮೈಲೇಜ್; ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಕೊಡಗಿನ ಇಂಜಿನಿಯರಿಂಗ್ ವಿದ್ಯಾರ್ಥಿ

ಮಡಿಕೇರಿ: ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಗಿರೀಶ್ ಲಾಕ್​ಡೌನ್​ ಅವಧಿಯಲ್ಲಿ 1000 ರೂಪಾಯಿ ತೆತ್ತು ಗುಜರಿಯಿಂದ ಬೈಕ್ ತಂದು ಸುಮಾರು 30 ಸಾವಿರ ರೂಪಾಯಿ ವೆಚ್ಚ ಮಾಡಿ ಬ್ಯಾಟರಿ ಚಾಲಿತ ಬೈಕ್ ತಯಾರಿಸಿದ್ದಾರೆ. ಗುಜರಿ ಬೈಕ್ ಅನ್ನು ಬ್ಯಾಟರಿ ಬೈಕ್ ಆಗಿ ಪರಿವರ್ತಿಸಿ, ಎಲೆಕ್ಟ್ರಾನಿಕ್ ಯುಗದಲ್ಲಿ ಹೊಸ ಚಾಪು ಮೂಡಿಸಿದ್ದಾರೆ.

ಹಳೆಯ ಸುಝುಕಿ ಸಮುರೈ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ್ದು, ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹೌದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದ ಇಂಜಿನಿಯರಿಂಗ್​ ವಿದ್ಯಾರ್ಥಿ ಗಿರೀಶ್, ಗುಜರಿಯಲ್ಲಿದ್ದ ಬೈಕ್​ಗೆ ಹೊಸ ರೂಪ ನೀಡಿ ಬ್ಯಾಟರಿ ಚಾಲಿತ ಬೈಕ್ ಆಗಿ ಪರಿವರ್ತಿಸಿದ್ದಾರೆ.

ತನ್ನ ಎಳೆಯ ಪ್ರಾಯದಿಂದಲೇ ಎಲೆಕ್ಟ್ರಿಕ್ ವಸ್ತುಗಳ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದ ಗಿರೀಶ್ ಸದಾ ಪ್ರಯೋಗಗಳಲ್ಲಿ ತಲ್ಲೀನರಾಗಿರುತ್ತಿದ್ದರು. ಗಿರೀಶ್​ಗೆ ಬ್ಯಾಟರಿ ಚಾಲಿತ ಬೈಕ್ ಒಂದನ್ನು ತಯಾರಿಸಬೇಕು ಎಂಬ ಆಸೆ ಇತ್ತು. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗಿರೀಶ್ ಲಾಕ್​ಡೌನ್​ ಅವಧಿಯಲ್ಲಿ ಗುಜರಿಯಿಂದ ಬೈಕ್ ತಂದು ಸುಮಾರು 30 ಸಾವಿರ ರೂಪಾಯಿ ವೆಚ್ಚ ಮಾಡಿ ಬ್ಯಾಟರಿ ಚಾಲಿತ ಬೈಕ್ ತಯಾರಿಸಿದ್ದಾರೆ.

ಗಿರೀಶ್ ನಿರ್ಮಿಸಿರುವ ಈ ಬೈಕ್ ಆರು ಗಂಟೆಗಳ ಕಾಲ ಚಾರ್ಜ್ ಮಾಡಿದರೆ, 40 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಹಾಗೂ ಇಷ್ಟು ದೂರ ತೆರಳಲು ತಗಲುವ ವೆಚ್ಚ ಕೇವಲ 10 ರೂಪಾಯಿ ಮಾತ್ರ.

ಗಿರೀಶ್ ಅವರು ಬೈಕ್​ಗೆ 750 ವ್ಯಾಟ್ ಸಾಮರ್ಥ್ಯದ ಮೋಟಾರ್ ಅಳವಡಿಸಿದ್ದು, 48 ವೋಲ್ಟ್ ಸಾಮರ್ಥ್ಯದ ಬ್ಯಾಟರಿ ಬಳಸಿದ್ದಾರೆ. ಆರು ಗಂಟೆಗಳ ಕಾಲ ಚಾರ್ಜ್ ಆಗಲು ಕೇವಲ 10 ರೂಪಾಯಿ ವೆಚ್ಚವಾಗುತ್ತದೆ. ಹೊಸ ಮಾದರಿಯ ಬೈಕ್ ಇದಾಗಿದ್ದು, ಈಗ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಬ್ಯಾಟರಿ ಚಾಲಿತ ಬೈಕ್​ಗಳಿಗಿಂತ ಯಾವುದರಲ್ಲು ಕಡಿಮೆ ಇಲ್ಲ. ಡಬ್ಬಲ್ ರೈಡಿಂಗ್ ಮಾಡುವಷ್ಟು ಸಾಮರ್ಥ್ಯವೂ ಇದಕ್ಕಿದೆ. ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿ ಇದು ಚಲಿಸುತ್ತಿದೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಗಿರೀಶ್ ಕರುಂಬಯ್ಯ ತಿಳಿಸಿದ್ದಾರೆ.

ಬೈಕ್​ಗೆ ಲೀಥಿಯಂ ಬ್ಯಾಟರಿ ಅಳವಡಿಸುವುದರ ಮೂಲಕ ಬೈಕ್​ನ ಶಕ್ತಿ ಸಾಮರ್ಥ್ಯ ಹೆಚ್ಚಿಸಲು ಗಿರೀಶ್ ನಿರ್ಧರಿಸಿದ್ದಾರೆ. ವಿದ್ಯಾರ್ಥಿ ಹಂತದಲ್ಲೇ ಪ್ರಯೋಗಗಳಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ಗಿರೀಶ್ ಮುಂದೊಂದು ದಿನ ಇದೇ ಕ್ಷೇತ್ರದಲ್ಲಿ ಮಿಂಚುವ ಭರವಸೆ ಇಟ್ಟುಕೊಂಡಿದ್ದಾರೆ.
ಬ್ಯಾಟರಿ ಚಾಲಿತ ಬೈಕ್ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಂಶೋಧನೆ ಮಾಡುವ ಬಯಕೆ ಗೀರಿಶ್​ ಅವರದ್ದಾಗಿದೆ. ಹೀಗಾಗಿ ತಮ್ಮ ಮಗನ ಸಾಧನೆಗೆ ಸೂಕ್ತ ಪ್ರೋತ್ಸಾಹ ನೀಡಿ ಬೆಂಬಲಿಸಿ ಎಂದು ಗೀರಿಶ್ ಪೋಷಕರು ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button