ಕೊಡಗು

ಕೊಡಗಿನಲ್ಲಿ ಮಳೆಯಿಂದ ಮೂರು ಸೇತುವೆಗಳಿಗೆ ಹಾನಿ; ಗುಡ್ಡ ಕುಸಿತದಿಂದಲೂ ತೊಂದರೆ

ಕೊಡಗು : ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಮತ್ತು ಆವಂಡಿ ಗ್ರಾಮ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಅತೀ ಮಳೆಯಿಂದ ಮೂರು ಸೇತುವೆಗಳಿಗೆ ಹಾನಿಯಾಗಿದೆ. ಗುಡ್ಡ ಕುಸಿತವೂ ಉಂಟಾಗಿದ್ದು, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಮುಕ್ಕೋಡ್ಲು, ಆವಂಡಿಯಲ್ಲಿ 3 ಸೇತುವೆಗಳು ಬಿರುಕು ಬಿಟ್ಟಿದ್ದು, ವಾಹನಗಳ ಸಂಚಾರ ಅಸಾಧ್ಯವಾಗಿದೆ. ಮಳೆಹಾನಿ ಪರಿಹಾರ ನಿಧಿಯ ಮೂಲಕ ದುರಸ್ತಿ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಒಂದು ಮನೆಗೆ ಹಾನಿ ಸಂಭವಿಸಿದ್ದು, ಮೇರಿಯಂಡ ರೆಸಾರ್ಟ್ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ಮುಕ್ಕೋಡ್ಲು, ಹಮ್ಮಿಯಾಲ, ಆವಂಡಿ ಮತ್ತು ಮುಟ್ಟು ಗ್ರಾಮ ವ್ಯಾಪ್ತಿಯಲ್ಲಿ ಕೃಷಿಗೆ ಹಾನಿಯುಂಟಾಗಿದೆ. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ನಷ್ಟಕ್ಕೆ ಒಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ಸ್ಪಷ್ಟಪಡಿಸಿದರು.

ಶಾಸಕ ಅಪ್ಪಚ್ಚು ರಂಜನ್ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರಕ್ಕೆ ಮನವಿ- ಮುಕ್ಕೋಡ್ಲು, ಹಮ್ಮಿಯಾಲ, ಮುಟ್ಟು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ಸಾವಿರದ ಐನೂರರಷ್ಟು ಕುಟುಂಬಗಳು ನೆಲೆಸಿವೆ. ಸಣ್ಣ ಪ್ರಮಾಣದಲ್ಲಿ ಭತ್ತ ಕಾಫಿ ಕೃಷಿಯನ್ನು ಇಲ್ಲಿ ನಡೆಸುವ ಮೂಲಕ ಕೃಷಿಕರ ಬದುಕು ನಡೆಯುತ್ತಿದೆ. ಆದರೆ, ಕಳೆದೆ 2018 ರಿಂದ ಸತತ ನಾಲ್ಕು ವರ್ಷಗಳ ಮುಂಗಾರಿನ ಅವಧಿಯಲ್ಲಿನ ವ್ಯಾಪಕ ಮಳೆಯಿಂದ ಕಾಫಿ, ಭತ್ತದ ಕೃಷಿಗೆ ವ್ಯಾಪಕ ಹಾನಿಯಾಗಿದ್ದು, ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಕೃಷಿಕರಿಗೆ ಎನ್‌ಡಿಆರ್‌ಎಫ್ ಮಾನದಂಡದಡಿ ಪರಿಹಾರ ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಮನವಿ ಮಾಡಿದರು. ಮಳೆ ಹಾನಿ ಪ್ರದೇಶಗಳಿಗೆ ಶಾಸಕರ ಭೇಟಿಯ ಸಂದರ್ಭ ಕಂದಾಯ ಅಧಿಕಾರಿಗಳು ಹಾಜರಿದ್ದು, ಆಗಿರುವ ಹಾನಿಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದರು.

Spread the love

Related Articles

Leave a Reply

Your email address will not be published. Required fields are marked *

Back to top button