ಕೊಡಗುಜಿಲ್ಲಾ ಸುದ್ದಿ

ಕೊಡಗು – ಮಡಿಕೇರಿ ದಸರಾ ಕರಗೋತ್ಸವಕ್ಕೆ ದೇವಾಲಯಗಳ ಸಮಿತಿ ನಿರ್ಧಾರ: ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ

ಮಡಿಕೇರಿ : ಈ ಬಾರಿ ಕರಗಗಳ ನಗರ ಸಂಚಾರದ ಮೂಲಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಕರಗೋತ್ಸವವನ್ನು ಆಚರಿಸಲು ನಾಲ್ಕು ಕರಗ ದೇವಾಲಯಗಳಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯ ಸಮಿತಿಗಳು ನಿರ್ಧರಿಸಿವೆ.

ಮಡಿಕೇರಿಯ ನಾಲ್ಕು ಶಕ್ತಿ ದೇವಾಲಯಗಳ ಕರಗ ಸಮಿತಿಗಳು ಶ್ರೀಕಂಚಿಕಾಮಾಕ್ಷಿಯಮ್ಮ ದೇವಾಲಯದಲ್ಲಿ ಸಭೆ ನಡೆಸಿ ಕರಗೋತ್ಸವದ ಕುರಿತು ಚರ್ಚಿಸಿದವು. ಅತಿವೃಷ್ಟಿ ಮತ್ತು ಕೋವಿಡ್ ಕಾರಣದಿಂದ ಕಳೆದ ಬಾರಿ ಕರಗಗಳ ನಗರ ಸಂಚಾರವಿರಲಿಲ್ಲ. ಆದರೆ ಈ ಬಾರಿ ಊರಿನ ಹಿತಕ್ಕಾಗಿ ನಗರ ಸಂಚಾರ ಮಾಡುವುದು ಸೂಕ್ತವೆಂದು ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ದೇವಾಲಯ ಸಮಿತಿಗಳು ಒಪ್ಪಿಗೆ ಸೂಚಿಸಿದವು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಜಿ.ವಿ.ರವಿಕುಮಾರ್, ಶಕ್ತಿ ದೇವತೆಗಳ ನಗರ ಸಂಚಾರದ ಕುರಿತು ವಿವರಿಸಿದರು.

ಅ.7 ರಿಂದ 15 ರವರೆಗೆ ಕರಗಗಳು ಸಂಚರಿಸಲಿದ್ದು, ಶ್ರದ್ಧಾಭಕ್ತಿಯ ಕರಗೋತ್ಸವಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಪ್ರತಿ ಕರಗಕ್ಕೆ ನವರಾತ್ರಿಗಳ ಸಾಂಪ್ರದಾಯಿಕ ಆಚರಣೆಗಳಿಗೆ ಸುಮಾರು 4 ರಿಂದ 5 ಲಕ್ಷ ರೂ. ಖರ್ಚಾಗುತ್ತಿದ್ದು, ಸರ್ಕಾರ ಹೆಚ್ಚಿನ ಅನುದಾನವನ್ನು ಕರಗ ಸಮಿತಿಗಳಿಗೆ ನೀಡಬೇಕೆಂದು ನಾಲ್ಕು ದೇವಾಲಯಗಳ ಪರವಾಗಿ ಕೋರಿಕೊಂಡರು.

ನಾಲ್ಕು ಕರಗಗಳು ನಗರ ಸಂಚಾರ ಮಾಡುವ ಸಂದರ್ಭ ಎಲ್ಲಾ ರಸ್ತೆಗಳಲ್ಲಿ ಶುಚಿತ್ವವನ್ನು ಕಾಪಾಡಲು ನಗರಸಭೆ ಕ್ರಮ ಕೈಗೊಳ್ಳಬೇಕು. ಕರಗೋತ್ಸವ ಆರಂಭಕ್ಕೂ ಮೊದಲೇ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಮತ್ತು ಬೀದಿ ದೀಪಗಳನ್ನು ದುರಸ್ತಿ ಪಡಿಸಬೇಕೆಂದು ರವಿಕುಮಾರ್ ಇದೇ ಸಂದರ್ಭ ಮನವಿ ಮಾಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button