ಹೆರಿಗೆ ಬಳಿಕ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬಸ್ಥರ ಆಕ್ರೋಶ

ಕಲಬುರಗಿ: ಹೆರಿಗೆ ವೇಳೆ ರಕ್ತಸ್ರಾವವಾಗಿ ಬಾಣಂತಿ ಮೃತಪಟ್ಟಿರುವ ಘಟನೆ ಅಫಜಲಪುರ ತಾಲೂಕಿನ ಆತನೂರ ಗ್ರಾಮದಲ್ಲಿ ನಡೆದಿದ್ದು, ವೈದ್ಯರ ನಿಲಕ್ಷವೇ ಇದಕ್ಕೆ ಕಾರಣ ಅಂತ ಮಹಿಳೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೀತಾ ನಿತೇಶ ಅಗಸರ (24) ಮೃತ ಬಾಣಂತಿ, ಇಂದು ಬೆಳಗ್ಗೆ 11:30 ರ ಸುಮಾರಿಗೆ ಆತನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೀತಾಗೆ ಹೆರಿಗೆ ಆಗಿದ್ದು, ಮುದ್ದಾದ ಗಂಡು ಮಗು ಜನಿಸಿದೆ. ಹೆರಿಗೆ ನಂತರ ರಕ್ತಸ್ರಾವ ಆರಂಭಿಸಿದೆ. ಸಿಬ್ಬಂದಿ ಗಮನಕ್ಕೂ ತಂದರೂ ಮುನ್ನೆಚ್ಚರಿಕೆ ವಹಿಸಲಿಲ್ಲ, ಪರಸ್ಥೀತಿ ಕೈಮಿರಿದಾಗ ಜಿಲ್ಲಾಸ್ಪತ್ರೆಗೆ ಕರೆದುಕೊಳ್ಳುವಂತೆ ಸೂಚಿಸಿದ್ದಾರೆ. ಒಂದು ಗಂಟೆ ಕಾಯದ್ರೂ ಅಂಬುಲೆನ್ಸ್ ಬರದೆ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿಗಳು ಇಲ್ಲದ ಕಾರಣ ಘಟನೆ ನಡೆದಿದೆ. ಮಹಿಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಆಕೆ ಬದುಕಿಲ್ಲ ಅಂತ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಗಂಡು ಮಗು ಆರೋಗ್ಯವಾಗಿದೆ.
ಗ್ರಾಮಸ್ಥರು ಆತನೂರ ಬಳಿಯ ಕಲಬುರಗಿ- ಅಫಜಲಪುರ ಹೆದ್ದಾರಿ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯ ರಸ್ತೆ ಸಂಪರ್ಕ ಕಡಿತಗೊಂಡು ಪ್ರಯಾಣಿಕರು ಪರದಾಡುತ್ತಿದ್ದಾರೆ.




