ಬಿಜೆಪಿಯ ಜನಾಶೀರ್ವಾದ ಯಾತ್ರೆ; ಕಲಬುರ್ಗಿ ಠಾಣೆಯಲ್ಲಿ ಪ್ರಕರಣ

ಕಲಬುರ್ಗಿ: ಜನಾರ್ಶೀವಾದ ಯಾತ್ರೆ ಹೆಸರಿನಲ್ಲಿ ಜನರನ್ನು ಸೇರಿಸಿ ಸಭೆ ಮಾಡಿದ ಹಿನ್ನೆಲೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೇಂದ್ರದ ನವೀಕರಿಸಬಹುದಾದ ಇಂಧನ, ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆಯ ನೂತನ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಮಂಗಳವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜನಾಶೀರ್ವಾದ ಕಾರ್ಯಕ್ರಮ ನಡೆದಿತ್ತು. ಸಾವಿರಾರು ಜನರನ್ನು ಒಂದಡೆ ಸೇರಿಸಲಾಗಿತ್ತು.
ಕೋವಿಡ್ ಸೋಂಕು ಆತಂಕ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ, ಸಮಾವೇಶ, ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಅಲ್ಲದೆ ಕಲಬುರಗಿ ಜಿಲ್ಲೆ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದ್ದರಿಂದ ರಾತ್ರಿ 9ರಿಂದ ನೈಟ್ ಕರ್ಫ್ಯೂ ಕೂಡ ಜಾರಿಯಲ್ಲಿದೆ. ಆದರೂ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಜನಾಶೀರ್ವಾದ ಯಾತ್ರೆಯ ಸಮಾರಂಭ ನಡೆಸಲಾಗಿತ್ತು.
ಹೀಗಾಗಿ ಕೋವಿಡ್ ಮಾರ್ಗಸೂಚಿ ಮತ್ತು ನಿರ್ಬಂಧಗಳ ಉಲ್ಲಂಘನೆ ಕಾರಣ ಕಲಬುರಗಿ ತಹಶೀಲ್ದಾರ್ ಪ್ರಕಾಶ ಕುದರಿ ಅವರು ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಅನ್ವಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮ ಆಯೋಜಕರು ಮತ್ತು ಕಲ್ಯಾಣ ಮಂಟಪದ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಭಂದಿಸಿದಂತೆ ಪೋಲಿಸರು ಹೆಚ್ವಿನ ತನಿಖೆ ಮುಂದುವರೆಸಿದ್ದಾರೆ.




