ಗುಲ್ಬರ್ಗಾ ವಿವಿಯಿಂದ ಯುಜಿ, ಪಿಜಿ ಪರೀಕ್ಷೆ ಸಿದ್ದತೆ: ಪರೀಕ್ಷೆ ಬೇಡ ಎನ್ನುತ್ತಿರುವ ವಿದ್ಯಾರ್ಥಿಗಳು

ಕಲಬುರಗಿ: ಒಂದು ಕಡೆ ಗುಲ್ಬರ್ಗ ವಿಶ್ವವಿದ್ಯಾಲಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ನಡೆಸಲು ಸಜ್ಜಾಗುತ್ತಿದೆ. ಇನ್ನೊಂದೆಡೆ ವಿವಿ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳೇ ಅಪಸ್ವರಗಳು ಎತ್ತುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ಪರೀಕ್ಷೆ ನಡೆಸುವುದು ಬೇಡ ಎಂಬ ಕೂಗು ಕೇಳಿಬರುತ್ತಿದೆ.
ಜುಲೈ 15 ನಂತರ ಯುಜಿ, ಪಿಜಿ ಪರೀಕ್ಷೆ ನಡೆಸಲು ಸಿದ್ದತೆ ನಡೆದಿದ್ದು, ಮೊದಲಿಗೆ 1, 3 ಮತ್ತು 5 ನೇ ಸೇಮಿಸ್ಟರ್ ಪರೀಕ್ಷೆ , ಬಳಿಕ ತಿಂಗಳ ಅಂತರದಲ್ಲಿ 2, 4, 6 ನೇ ಸೇಮಿಸ್ಟರ್ ಪರೀಕ್ಷೆ ನಡೆಸಲು ವಿವಿ ಸಿದ್ದತೆ ಮಾಡಿಕೊಂಡಿದೆ. ಆದರೆ ಈಗಾಗಲೇ ಕೋವಿಡ್ ಹಿನ್ನಲೆ ಪರೀಕ್ಷೆ ಇಲ್ಲದೆ ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ಅನುಕೂಲ ಕಲ್ಪಿಸಲಾಗಿದೆ. ಒಂದನೇ ಸೇಮಿಸ್ಟರ್ ಪರೀಕ್ಷೆ ಇಲ್ಲದೆ ಎರಡನೇ ಸೇಮಿಷ್ಟರ್ ನಲ್ಲಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಇದೀಗ ತಿಂಗಳ ಅಂತರದಲ್ಲಿ ಒಂದನೇ ಹಾಗೂ ಎರಡನೇ ಸೇಮಿಸ್ಟರ್ ಪರೀಕ್ಷೆ ವಿದ್ಯಾರ್ಥಿಗಳು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ತಿಂಗಳ ಅಂತರದಲ್ಲಿ ಎರಡು ಸೆಮ್ ಪರೀಕ್ಷೆ ನೀಡುವದು ಕಷ್ಟವಾಗಲಿದೆ ಅಂತ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಕೊವೀಡ್ ಹಿನ್ನೆಲೆ ಆರ್ಥಿಕ ಸಂಕಷ್ಟದಿಂದ ಹಲವು ವಿದ್ಯಾರ್ಥಿಗಳು ಕುಟುಂಬ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲೇ ವಿವಿ ಆಡಳಿತ ಮಂಡಳಿ ಏಕಕಾಲಕ್ಕೆ ಎರಡು ಸೆಮಿಸ್ಟರ್ ಪರೀಕ್ಷೆ ಬರೆಯಲು ಹೇಳುತ್ತಿದೆ. ಇದು ತುಂಬಾ ಕಷ್ಟವಾಗಲಿದೆ. ಎರಡು ಸೆಮ್ ಮಧ್ಯೆ ಹೆಚ್ಚಿನ ಸಮಯಾವಕಾಶ ಕೊಡಬೇಕು ಅನ್ನೋದು ವಿದ್ಯಾರ್ಥಿಗಳ ಒತ್ತಾಯಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಏಕಕಾಲಕ್ಕೆ ಪರಿಕ್ಷೆ
ವಿದ್ಯಾರ್ಥಿಗಳ ವಿರೋಧದ ನಡುವೆ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿರುವ ವಿವಿ ಆಢಳಿತ ಮಂಡಳಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಎರಡು ಸೇಮ್ ಪರೀಕ್ಷೆ ನಡೆಸುತ್ತಿದ್ದೇವೆ ಎಂಬ ಮಾತು ಹೇಳುತ್ತಿದೆ. ಈಗಾಗಲೇ ಪರೀಕ್ಷೆಗಳು ಸಾಕಷ್ಟು ವಿಳಂಬವಾಗಿವೆ. ಈಗ ಅವರೆಲ್ಲರೂ ಮುಂದಿನ ಸೆಮಿಸ್ಟರ್ನ ಅಭ್ಯಾಸ ಮಾಡುತ್ತಿದ್ದಾರೆ. ಎರಡು ಸೆಮ್ ಕ್ಲಿಯರ್ ಮಾಡಿಕೊಂಡರೆ ಮುಂದಿನ ಅವರ ವ್ಯಾಸಂಗಕ್ಕೆ ಅನುಕೂಲವಾಗಲಿದೆ ಅನ್ನೋ ಮಾತನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ವಿರೋಧ ಮಾಡುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರೀಕ್ಷೆ ರದ್ದು ಮಾಡಲು ಕೊರುತ್ತೇವೆ. ಸರ್ಕಾರ ಮುಂದೆ ನೀಡುವ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ.
ಒಟ್ಟಾರೆ ವಿಶ್ವವಿದ್ಯಾಲಯ ದಿಢೀರ್ ನಿರ್ಧಾರದಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಡಿ ಇಲ್ಲವೇ, ಸಮಯವಕಾಶ ನೀಡಿ ಅಂತ ವಿದ್ಯಾರ್ಥಿಗಳು ಮಾಡುತ್ತಿರುವ ಮನವಿಗೆ ಸರ್ಕಾರ ಯಾವ ರೀತಿ ಸ್ಪಂಧನೆ ನೀಡಲಿದೆ ಕಾಯ್ದು ನೋಡಬೇಕು.




