ಕೇಂದ್ರದಿಂದ ಉದ್ಯೋಗ ಖಾತ್ರಿ ಕಾಯ್ದೆ ಕುತ್ತಿಗೆ ಹಿಸುಕುವ ಕೆಲಸ: ಹೊರಾಟಗಾರ್ತಿ ಕೆ ನೀಲಾ

ಕಲಬುರಗಿ: ಮೋದಿ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದೆ ಎಂದು ಪ್ರಗತಿಪರ ಹೋರಾಟಗಾರ್ತಿ ಕೆ.ನೀಲಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ವರ್ಗದ ನಡುವೆ ಜಾತಿಭೇದದ ಬೀಜ ಬಿತ್ತುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಉದ್ಯೋಗ ಖಾತ್ರಿಗೆ ಎಸ್‌ಸಿ ಎಸ್ಟಿ ಅನುದಾನ ಬಳಕೆ ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದ ಅವರು, ದೇಶದ ಜನ ತೆರಿಗೆ ರೂಪದಲ್ಲಿ ನೀಡಿದ ಹಣ ಸಾಲಷ್ಟಿದೆ ಅದನ್ನು ಬಳಕೆ ಮಾಡಿ ಹೊರತಾಗಿ ಎಸ್‌ಸಿ ಎಸ್ಟಿ ವಿಶೇಷ ಅನುದಾನ ಉದ್ಯೋಗ ಖಾತ್ರಿಗೆ ಬಳಕೆ ಮಾಡಬಾರದು ಎಂದು ಆಗ್ರಹಿಸಿದರು.
ಕೊರೊನಾ ಸಂಕಷ್ಟದ ಹಿನ್ನಲೆ 200 ದಿನಗಳ ಉದ್ಯೋಗ ಸೃಷ್ಟಿಸಿ 600 ರೂಪಾಯಿ ವೇತನ ನೀಡುವಂತೆ ಮನವಿ ಮಾಡಿದರೆ ಕೇಂದ್ರ ಸರ್ಕಾರ ತದ್ವಿರುದ್ದ ನಡೆದುಕೊಂಡಿದೆ. ಕಳೆದ ಎರಡು ವರ್ಷಕ್ಕೆ ಹೊಲಿಸಿದರೆ ಈ ವರ್ಷ ಕೇವಲ 20 ದಿನಗಳ ಉದ್ಯೋಗ ನೀಡುವ ಕೆಲಸ ಮಾಡಿದೆ. ಹಲವು ಜಿಲ್ಲೆಗಳಲ್ಲಿ ಜಿರೋ ಉದ್ಯೋಗ ಸೃಷ್ಟಿ ಇದೆ. ಕೆಲವಡೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಸುಳ್ಳು ಹಾಜರಿ ಹಾಕಿ ಹಣ ಲೂಟಿ ಮಾಡುವ ಮೂಲಕ ನಿಜವಾಗಿ ದುಡಿಯುವ ಜನರಿಗೆ ಉದ್ಯೋಗ ಕೊಡ್ತಿಲ್ಲ, ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಸುತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕೇಂದ್ರ ಸರ್ಕಾರ ಷಡ್ಯಂತ್ರ ಕುತಂತ್ರ ನಡೆಸುವದನ್ನು ಬಿಟ್ಟು, ದೇಶದ ತುಂಬೆಲ್ಲ ಸಮರ್ಪಕವಾಗಿ ಉದ್ಯೋಗ ಖಾತ್ರಿ ವಿಸ್ತರಿಸಬೇಕು. ಹಳ್ಳಿ ಮಾದರಿಯಲ್ಲಿಯೇ ಪಟ್ಟಣಕ್ಕೂ ಉದ್ಯೋಗಖಾತ್ರಿ ತರಬೇಕು.ಉದ್ಯೋಗ ಕೇಳಿ ಬಂದವರಿಗೆ ವಾಪಸ್ ಕಳಿಸದೆ ಉದ್ಯೋಗ ಕೊಡಬೇಕು. ಕನಿಷ್ಠ 200 ದಿನ ಉದ್ಯೋಗ ಸೃಷ್ಟಿಸಿ 600 ರೂಪಾಯಿ ಕೂಲಿ ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.




