ರಾಜ್ಯದಲ್ಲಿ ಕೋವಿಡ್ 3ನೇ ಅಲೆ ತಡೆಗೆ ಈಗಿನಿಂದಲೇ ಕ್ರಮ: ಸಚಿವೆ ಶಶಿಕಲಾ ಜೋಲ್ಲೆ

ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಐಎಎಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಬಾಗಲಕೋಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ಹೇಳಿದರು..
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರನೇ ಅಲೆ ಮುಂಜಾಗ್ರತಾ ಸಭೆ ನಡೆಸಿದ ಅವರು, ಮೋಹನ್ ರಾಜ್ ಎಂಬುವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ, ಮೂರನೇ ಅಲೆ ಮಕ್ಕಳ ಮೇಲೆ ಬೀರದಂತೆ ಮುಂಜಾಗ್ರತಾ ಕ್ರಮದ ಸಿದ್ಧತೆ ಮಾಡಿಕೊಳ್ಳವಾಗುತ್ತಿದೆ ಎಂದರು.
ಎರಡನೇ ಅಲೆಯ ಭೀಕರತೆಗೆ ರಾಜ್ಯದಲ್ಲಿ 32ಮಕ್ಕಳು ಅನಾಥರಾಗಿದ್ದಾರೆ. ಕೋವಿಡ್ ಬಂದು ಪೋಷಕರು ಮರಣವನ್ನು ಹೊಂದಿದ್ದಾರೆ. ನಾನು ವಿಡಿಯೋ ಸಂವಾದ ಮೂಲಕ ಅನಾಥ ಮಕ್ಕಳ ಸಂಬಂಧಿಕರೊಂದಿಗೆ ಮಾತನಾಡಿರುವೆ, ಅವರು ದತ್ತು ತೆಗೆದುಕೊಳ್ಳಲು ಅವಕಾಶವಿದೆ. ಇಲ್ಲವಾದರೆ ದತ್ತು ತೆಗೆದುಕೊಳ್ಳಲು ತೀರ್ಮಾನ ಮಾಡಲಾಗುವುದು. ಜೊತೆಗೆ ಅನಾಥ ಮಕ್ಕಳ ದತ್ತು ಪಡೆಯಲಾಗುತ್ತದೆ ಎಂದು ಫೇಕ್ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನಂಬಬಾರದು ಎಂದರು.




