ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯ ನೀಡಲು ಶ್ರಮಿಸುತ್ತೇನೆ: ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಉಡುಪಿ : ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ನಾನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯ ನೀಡಲು ಶ್ರಮಿಸುತ್ತೇನೆ ಮತ್ತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಇಲಾಖೆಯು ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿವರೆಗೆ ಪ.ಜಾತಿ ಅವರಿಗೆ ಮನೆ ನಿರ್ಮಾಣಕ್ಕೆ 1.70 ಲಕ್ಷ ಮಾತ್ರ ಲಭ್ಯವಿತ್ತು. ಈಗ ಈ ಮೊತ್ತವನ್ನು 5 ಲಕ್ಷದವರೆಗೆ ಏರಿಸುವಂತೆ ಹಣಕಾಸು ಇಲಾಖೆಗೆ ಶಿಫಾರಸ್ಸು ಮಾಡಿದ್ದೇನೆ. ನಮ್ಮ ಇಲಾಖೆಯೊಳಗೆ ಬರುವ ಪ.ಜಾ ಅಥವಾ ಪ.ಪಂ. ದವರು ಇರುವ ನೆಲ ಸರಕಾರಿ ಅಥವಾ ಖಾಸಗಿಯಾಗಿದ್ದರೆ ಅವರಿಗೆ ಹಕ್ಕು ಪತ್ರ ನೀಡಲು ಬೇಕಾದ ಯೋಜನೆ ರೂಪಿಸಲು ನಮ್ಮ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದರು.‘
ಸುಳ್ಳು ಪ್ರಕರಣ ಕೈಬಿಡುವಂತೆ ಗ್ರಹ ಸಚಿವರಿಗೆ ಮನವಿ
ಹಿಂದಿನ ಸರಕಾರ ಒಂದು ವರ್ಗದವರ ಮೇಲಿನ ಪ್ರಕರಣ ಕೈಬಿಟ್ಟು ನಮ್ಮವರ ಮೇಲಿನ ಸುಳ್ಳು ಕೇಸು ಮುಂದುವರಿದಿದೆ. ಹಾಗಾಗಿ ಈ ಕುರಿತು ಹಿಂದು ಸಂಘಟನೆಗಳು ನೀಡಿದ ಮನವಿಯನ್ನು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ನೀಡಿದ್ದೇನೆ. ಸಂಘಟನೆಯ ಮೇಲಿರುವ ಸುಳ್ಳು ಪ್ರಕರಣಗಳನ್ನು ಕೈ ಬಿಡುವಂತೆ ಅವರಲ್ಲಿ ಮನವಿ ಮಾಡಿದ್ದೇನೆ ಮತ್ತು ರಾಜ್ಯದಲ್ಲಿರುವ ಎಲ್ಲಾ ಪ್ರಕರಣಗಳ ಮಾಹಿತಿ ಪಡೆದು, ಸುಳ್ಳು ಕೇಸುಗಳನ್ನು ವಾಪಾಸ್ ತೆಗೆಯುವ ಭರವಸೆ ಗೃಹಮಂತ್ರಿ ನೀಡಿದ್ದಾರೆ ಎಂದು ತಿಳಿಸಿದರು.




