ಕೊಡಗುಜಿಲ್ಲಾ ಸುದ್ದಿ
ತನ್ನ 5ನೇ ಮದುವೆಗೆ ಒಪ್ಪದ 4ನೇ ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

ಕೊಡಗು : ಪತ್ನಿಯ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪತಿ ಮಹಾಶಯ ಪರಾರಿಯಾದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ 35 ವರ್ಷ ವಯಸ್ಸಿನ ಕ್ಷೇತ್ರ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಸುಗುಣ ತಲೆಮರೆಸಿಕೊಂಡಿದ್ದಾನೆ.
ಹಲ್ಲೆ ಮಾಡಿ ಪರಾರಿಯಾದ ತನ್ನ ಪತಿಯ ವಿರುದ್ದ ಪತ್ನಿ ಕ್ಷೇತ್ರ ಪೊಲೀಸ್ ಗೆ ದೂರು ನೀಡಿದ್ದಾರೆ. ಕ್ಷೇತ್ರ ಸುಗುಣನ ನಾಲ್ಕನೇ ಪತ್ನಿಯಾಗಿದ್ದು, ಐದನೇ ವಿವಾಹವಾಗಲು ಸುಗುಣ ಯತ್ನಿಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಗಾರ ಪತಿ ಸುಗುಣ ತನ್ನನ್ನು ಯಾವುದೇ ಕ್ಷಣ ಕೊಲೆ ಮಾಡಬಹುದು ಎಂದು ಕ್ಷೇತ್ರ ಜೀವ ಭಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ತನಗೆ ಜೀವ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊನ್ನಂಪೇಟೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.




