ಹುಬ್ಬಳ್ಳಿ - ಧಾರವಾಡ

ದಾರಿ ತಪ್ಪಿ ಕಾಡುಪಾಲು; ನಾಲ್ಕು ದಿನಗಳ ಬಳಿಕ ಕುಟುಂಬಸ್ಥರನ್ನು ಸೇರಿದ ಹಿರಿಯ ಜೀವ

ಧಾರವಾಡ: ಮಗಳ ಮನೆಗೆಂದು ಹೋದ ನೂರು ವರ್ಷದ ವೃದ್ಧನೋರ್ವ ದಟ್ಟ ಅಡವಿಯಲ್ಲಿ ದಾರಿ ತಪ್ಪಿ ಹೋಗಿ, ನಾಲ್ಕು ದಿನಗಳ ನಂತರ ಪತ್ತೆಯಾಗಿದ್ದಾನೆ. ನಾಲ್ಕು ಹಗಲು, ಮೂರು ರಾತ್ರಿ ಅರಣ್ಯ ಪ್ರದೇಶದಲ್ಲಿ ಅನ್ನಾಹಾರವಿಲ್ಲದಿದ್ದರೂ ತನ್ನ ಮನೆಯವರನ್ನು ಸೇರಲೇಬೇಕೆಂಬ ಛಲದೊಂದಿಗೆ ನಡೆದಾಡುತ್ತಲೇ ಇದ್ದ ವೃದ್ಧ ಕೊನೆಗೂ ಸಂಬಂಧಿಕರನ್ನು ಸೇರಿದ್ದಾನೆ. ಪವಾಡಸದೃಶ ರೀತಿಯಲ್ಲಿ ಬದುಕುಳಿದಿರೋ ಅಜ್ಜನನ್ನು ನೆರೆ – ಹೊರೆ ಗ್ರಾಮಸ್ಥರು ಬಂದು ಮಾತನಾಡಿಸಿ, ಕುಶಲೋಪರಿ ವಿಚಾರಿಸುತ್ತಿದ್ದಾರೆ.

ದಟ್ಡ ಕಾಡಿನಲ್ಲಿ‌‌ ನಾಲ್ಕು ದಿನ ಆಹಾರವಿಲ್ಲದಿದ್ದರೂ ನೂರು ವರ್ಷದ ವೃದ್ಧ ಬದುಕುಳಿದಿರೋ ಘಟನೆ ಧಾರವಾಡ ಜಿಲ್ಲೆ ಕಲಘಟಕಿ ತಾಲೂಕಿನಲ್ಲಿ ನಡೆದಿದೆ. ನಾಲ್ಕು ದಿನಗಳ‌ ಹಿಂದೆ ದಟ್ಟವಾದ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದ ವೃದ್ಧ, ಹಗಲು ರಾತ್ರಿ ಆಹಾರ, ನೀರು ಸೇವಿಸದೇ, ವಿಶ್ರಾಂತಿ‌ಯನ್ನು ಪಡೆಯದೇ ಮರಳಿ ಸಂಬಂಧಿಕರ ಕೈಗೆ ಸಿಕ್ಕಿದ್ದಾನೆ. ಇಂಥದ್ದೊಂದು ಘಟನೆಗೆ, ಜಿಲ್ಲೆಯ ಬೈಚವಾಡ ಗ್ರಾಮ ಸಾಕ್ಷಿಯಾಗಿದೆ. ಗೌಳಿದಡ್ಡಿ (ಬೈಚವಾಡ)ಯ ಜನ್ನು ಮಾಂಬು ಪಾಂಡ್ರಮೀಸೆ ಎಂಬ 114 ವರ್ಷ ವಯಸ್ಸಿನ ವ್ಯಕ್ತಿಯೇ ಪವಾಡಸದೃಶ ರೀತಿಯಲ್ಲಿ ಬದುಕುಳಿದ ವೃದ್ಧನಾಗಿದ್ದಾನೆ.

ಹೊಲಕ್ಕೆ ಹೋಗುವುದಾಗಿ ಹೇಳಿ ಜನ್ನು ಮಾಂಬು‌ ಜೂನ್ 26 ಬೆಳಿಗ್ಗೆ ಮನೆಯಿಂದ ತೆರಳಿದ್ದ. ನಂತರ ಪಕ್ಕದ ಬೈಚವಾಡದಲ್ಲಿನ ತನ್ನ ಮಗಳ‌ ಮನೆಗೆ ಹೋಗಿ ಅಲ್ಲಿ ಕೆಲ ಹೊತ್ತು ಉಳಿದಿದ್ದ. ಸ್ವಗ್ರಾಮ ಗೌಳಿದಡ್ಡಿಗೆ ಮರಳುವಾಗ ವೃದ್ಧ ದಾರಿ ತಪ್ಪಿಸಿಕೊಂಡಿದ್ದ. ದಟ್ಟ ಅರಣ್ಯದಲ್ಲಿ ಕಾಲು ದಾರಿಯಲ್ಲಿ ನಡೆದು ಬರುವಾಗ ದಾರಿ ತಪ್ಪಿಸಿಕೊಂಡು ವೃದ್ಧ ಅಲೆದಾಡಿದ್ದ. ಹೊಲಕ್ಕೆ ಹೋಗೋದಾಗಿ ಹೇಳಿ ಹೋಗಿದ್ದ ವೃದ್ಧ ಮನೆಗೆ ವಾಪಸ್ ಬಾರದೇ ಇದ್ದಾಗ ಸಂಬಂಧಿಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಮಗಳ ಮನೆಗೆ ಹೋಗಿದ್ದ ವಿಚಾರ ತಿಳಿದು ಅಲ್ಲಿಯೂ ಹುಡುಕಾಡಿದಾಗ ಸಿಕ್ಕಿಲ್ಲ.

ಕೊನೆಗೆ ಉಭಯ ಗ್ರಾಮಗಳ ಜನರು, ವೃದ್ಧನ ಸಂಬಂಧಿಕರು, ಗ್ರಾಮದ ಹಿರಿಯರು, ಯುವಕರು ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆಗೂಡಿ ಹುಡುಕಾಟ ನಡೆಸಿದ್ದಾರೆ. ಹಲವಾರು ತಂಡಗಳನ್ನು ಮಾಡಿಕೊಂಡು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ನಾಲ್ಕು ದಿನ ಹುಡುಕಾಟ ಮಾಡಿದ್ದಾರೆ. ಕೊನೆಗೂ ಕಾಣೆಯಾಗಿದ್ದ ಜನ್ನು ಬೈಚವಾಡದ ದಟ್ಟ ಅರಣ್ಯದಲ್ಲಿ ಪತ್ತೆಯಾಗಿದ್ದಾನೆ. ನಾಪತ್ತೆಯಾಗಿದ್ದ ವೃದ್ಧ ಮೂರು ರಾತ್ರಿಗಳನ್ನು, ನಾಲ್ಕು ಹಗಲುಗಳನ್ನು ಅರಣ್ಯದಲ್ಲಿ ಕಳೆದಿದ್ದಾನೆ.

ಕಾಡು‌ ಪ್ರಾಣಿಗಳ‌ ಭಯದಲ್ಲಿಯೇ ಮಳೆ, ಚಳಿ ಎನ್ನದೆ ವೃದ್ಧ ಅಲೆದಾಡಿದ್ದಾನೆ. ನಿದ್ದೆಯನ್ನು‌ ಮಾಡದೇ, ಆಹಾರವನ್ನು ಸೇವಿಸದೇ, ನೀರನ್ನು ಕುಡಿಯದೇ, ಯಾರಾದರೂ ಬರುತ್ತಾರೆ ಎಂಬ ವಿಶ್ವಾಸದಲ್ಲಿಯೇ ವೃದ್ಧ ಅರಣ್ಯ ಪ್ರದೇಶದಲ್ಲಿ ಕಾಲ ದೂಡಿದ್ದಾರೆ. ನಾಲ್ಕು ದಿನಗಳ ನಂತರ ಆರೋಗ್ಯವಂತವಾಗಿಯೇ ವೃದ್ಧ ಕುಟುಂಬದ ಸದಸ್ಯರನ್ನು ಸೇರಿದ್ದಾನೆ.

ಪವಾಡ ಸದೃಶ ರೀತಿಯಲ್ಲಿ ಬಚಾವಾಗಿ ಬಂದಿದ್ದಾನೆಂದು ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರಿಂದ ವೃದ್ಧನಿಗೆ ಸನ್ಮಾನ ಮಾಡಿದ್ದಾರೆ. ನೀರು ಕುಡಿಸಿ, ಆಹಾರ ನೀಡಿ ಸಮಾಧಾನಪಡಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ವೃದ್ಧನನ್ನು ನೋಡಲು ನೆರೆ ಹೊರೆಯ ಗ್ರಾಮಸ್ಥರು ಬರುತ್ತಿದ್ದು, ಅಜ್ಜನ ಕುಶಲೋಪರಿ ವಿಚಾರಿಸಿಕೊಂಡು ಹೋಗುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button