ಗೋವಾದಲ್ಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಹಿನ್ನೆಲೆ; ಹುಬ್ಬಳ್ಳಿಯಿಂದ ತೆರಳುವ ಪ್ರಯಾಣಿಕರಿಗೆ ಉಚಿತ ಟೆಸ್ಟ್

ಹುಬ್ಬಳ್ಳಿ: ಗೋವಾ ಸರ್ಕಾರದಿಂದ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ, ರಾಜ್ಯಕ್ಕೆ ಬರುವ ಸಾರ್ವಜನಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ್ದು, ಅನ್ಯ ರಾಜ್ಯಗಳ ಪ್ರಯಾಣಿಕರು 72 ಗಂಟೆಗಳ ಮುಂಚಿತವಾಗಿ ಪಡೆದಿರುವ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಯೊಂದಿಗೆ ನಗರದಿಂದ ಗೋವಾ ರಾಜ್ಯಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ನೂರಾರು ಜನರು ಕೆಲಸ ಕಾರ್ಯಗಳಿಗಾಗಿ ಗೋವಾಕ್ಕೆ ತೆರಳುತ್ತಿದ್ದು, ಪ್ರಯಾಣಕ್ಕೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಬಹಳಷ್ಟು ತೊಂದರೆಯಾಗಿತ್ತು. ಪರೀಕ್ಷೆ ಮಾಡಿಸಿಕೊಳ್ಳದೆ ತೆರಳುವವರಿಗೆ ಗೋವಾ ರಾಜ್ಯದ ಗಡಿಯಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಅದಕ್ಕೆ ರೂ.270 ಪಾವತಿಸಬೇಕಾಗಿತ್ತು. ಒಂದು ವೇಳೆ ಸೋಂಕು ದೃಢಪಟ್ಟರೆ ಪ್ರವೇಶ ನಿರಾಕರಿಸಲಾಗುತ್ತಿತ್ತು.
ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ನೆಗೆಟಿವ್ ವರದಿ ಇರುವ ಪ್ರಯಾಣಿಕರಿಗೆ ಗೋವಾಕ್ಕೆ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ವಿಶೇಷ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಗೋವಾಗೆ ತೆರಳು ಪ್ರಯಾಣಿಕರು ಬೆಳಿಗ್ಗೆ 10ಗಂಟೆಯ ಒಳಗೆ ಗೋಕುಲ ರಸ್ತೆ ಬಸ್ ನಿಲ್ದಾಣಕ್ಕೆ ಬರಬೇಕು. ಅಲ್ಲಿ ಅವರಿಗೆ ಉಚಿತವಾಗಿ ಮೊದಲು ರಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತದೆ. ಅದರಲ್ಲಿ ನೆಗೆಟಿವ್ ವರದಿ ಬಂದವರಿಗೆ ಮಾತ್ರವೇ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿ, ಮುಂದಿನ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸೋಂಕು ದೃಡಪಟ್ಟರೆ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ.
ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿ ನಿತ್ಯ ಪಣಜಿಗೆ 1ರಾಜಹಂಸ ಮತ್ತು 8 ವೇಗಧೂತ ಬಸ್, ವಾಸ್ಕೋಗೆ 1 ಮತ್ತು ಮಡಗಾಂವಗೆ 1 ಒಟ್ಟು 11 ಬಸ್ಸುಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು. ಕೋವಿಡ್ ಎರಡನೆ ಅಲೆ ಲಾಕ್ ಡೌನ್ ಕಾರಣದಿಂದಾಗಿ ಕಳೆದ ಏಪ್ರಿಲ್ 27 ರಿಂದ ಈ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಭಾಗಶಃ ನಿರ್ಬಂಧಗಳ ತೆರವು ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಪಣಜಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಬಸ್ಸುಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ. ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ವಾಸ್ಕೋ ಮತ್ತು ಮಡಗಾಂವಗೆ ಬಸ್‌ಗಳನ್ನು ಓಡಿಸುವ ಸಾಧ್ಯತೆ ಇದೆ.




