ಹತ್ತಾರು ರೋಗಗಳಿಗೆ ಸೀತಾಫಲ ಮದ್ದು: ಬಿಸಿಲೂರು ಕಲಬುರಗಿಯಲ್ಲಿ ಸೀತಾಫಲ ದರ್ಬಾರ್…

ವಿಶೇಷ ವರದಿ : ವೀರೇಶ ಚಿನಗುಡಿ
ಕಲಬುರಗಿ: ಹಣ್ಣಿನ ರಾಜ ಮಾವು, ಮಾವಿಗಿಂತ ಸುಮಾರು ಪಟ್ಟು ಹೆಚ್ಚಿನ ಔಷಧಿ ಗುಣಹೊಂದಿರುವ ಸೀತಾಫಲ ಹಣ್ಣಿನ ಸೀಜನ್ ಈಗ ಪ್ರಾರಂಭಗೊಂಡಿದೆ. ಬಿಸಿಲುನಾಡು ಕಲಬುರಗಿ ಜಿಲ್ಲೆಯ ಪ್ರತಿಕುಲ ಹವಮಾನಕ್ಕೆ ಹೊಂದಿಕೊಳ್ಳುವ ಸೀತಾಫಲ ಹಣ್ಣು ಸವಿದವರ ಬಾಯಿಗೆ ಸವಿರೂಚಿ ನೀಡುವದರೊಂದಿಗೆ ಹಲವು ಕುಟುಂಬಗಳಿಗೆ ಆಸೆರೆಯಾಗಿ ನಿಂತಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಸೀತಾಫಲ ಸೀಜನ್ ಇರುತ್ತದೆ. ಮೈತುಂಬಾ ಕಣ್ಣು ಹೊದ್ದಿರುವ ಈ ಹಣ್ಣಿನಲ್ಲಿ ಬಹಳಷ್ಟು ರೋಗ ನೀರೊಧಕ ಶಕ್ತಿ ಇದೆ. ಕಾಡು ಪ್ರದೇಶದಲ್ಲಿ ಹೇರಳವಾಗಿ ಈ ಹಣ್ಣು ಸಿಗುತ್ತದೆ. ಮೇಲಾಗಿ ಅರಣ್ಯ ಇಲಾಖೆ ಸೀತಾಫಲ ಬೀಜಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ಹರಡುವ ಮೂಲಕ ಸೀತಾಫಲದ ಕೃಷಿ ಕೈಗೊಂಡಿದೆ. ಹೀಗಾಗಿ ಕಡಿಮೆ ದರದಲ್ಲಿ ರುಚಿಯಾದ ಹಣ್ಣುಗಳು ಸಿಗುತ್ತವೆ. ಔಷಧಿ ಗುಣ ಹೊಂದಿರುವ ಸೀತಾಫಲ ಹಣ್ಣಿನ ದರ್ಬಾರ್ ಸದ್ಯ ಜೊರಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಸೇರಿದಂತೆ ಹಲವಡೆ ಗುಡ್ಡಗಾಡು ಪ್ರದೇಶಗಳಲ್ಲಿ ಸೀತಾಫಲ ಹಣ್ಣು ಬೆಳೆದು ನಿಂತಿದ್ದು, ಉಚಿತವಾಗಿ ಸಿಗುವ ಹಣ್ಣನ್ನು ಕಡೆದು ತಂದು ಮಾರಾಟ ಮಾಡುವ ಮೂಲಕ ಅನೇಕ ಕುಟುಂಬಗಳು ಉಪ ಜೀವನ ನಡೆಸುತ್ತಿವೆ. ದಿನಬೆಳಗಾದರೆ ಮಹಿಳೆಯರು, ಪುರುಷರು ಕಾಡಿಗೆ ಅಲೆದಾಡಿ ಹಣ್ಣುಗಳನ್ನು ಸಂಗ್ರಹಿಸಿ ನಗರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾರೆ.
ಆಯುರ್ವೇದ ಔಷಧಿಯಾಗಿ ಗುಣ ಹೊಂದಿದ ಸೀತಾಫಲ:
ವಿಟಮಿನ್- ಎ ಮತ್ತು ಸಿ ಸಮರ್ಪಕವಾಗಿ ಸಿಗುವ ಸೀತಾಫಲ ಹಣ್ಣು ಆಯುರ್ವೇದಿಕ ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಪೊಟಾಶಿಯಂ ಹೃದಯಬೇನೆ, ಪಾರ್ಶ್ವವಾಯುವಿಗೆ ಮದ್ದಾಗಿದೆ. ಜ್ವರ, ಕೆಮ್ಮು, ಅಸ್ತಮಾ, ಕೀಲುನೋವು ಸೇರಿದಂತ ಹತ್ತಾರು ರೋಗಗಳನ್ನು ತಡೆಯಲು ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಸೀತಾಫಲ ಹಣ್ಣು ಮಾತ್ರವಲ್ಲ ಹಣ್ಣಿನಲ್ಲಿರುವ ಬೀಜ, ಸಿಪ್ಪೆ, ಸೀತಾಫಲ ಗಿಡದ ತೊಗಟೆ, ಎಲೆ ಸಹ ಹತ್ತಾರು ರೋಗಗಳನ್ನು ತಡೆಯಲು ಸಹಕಾರಿಯಾಗಿದೆ. ಶೇ.70 ರಷ್ಟು ತೇವಾಂಶವನ್ನು ಹೊಂದಿರುವ ಹೈಡ್ರೇಟಿಂಗ್ ಹಣ್ಣು ಸೀತಾಫಲ ಆಗಿದ್ದು, 100 ಗ್ರಾಂ. ಸೀತಾಫಲದಲ್ಲಿ 80-100 ಕ್ಯಾಲೊರಿ ಪೌಷ್ಠಿಕಾಂಶ, ಪ್ರೋಟೀನ್, ಕೊಬ್ಬು ಮತ್ತು ಕಬ್ಬಿಣದ ಪ್ರಮಾಣ ಸಿಗುತ್ತದೆ ಅನ್ನೋದು ಆಯುರ್ವೇದ ವೈದ್ಯರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ವರ್ಷದ ಸೆಪ್ಟೆಂಬರ್ ಅಕ್ಟೋಬರ್ ಎರಡು ತಿಂಗಳು ಸೀತಾಫಲ ಹಣ್ಣಿನ ಪ್ರಿಯರಿಗೆ ಖುಷಿ ಸಿಗುವದು ಒಂದಡೆಯಾದ್ರೆ, ರೋಗನಿರೋಧಕ ಶಕ್ತಿವುಳ್ಳ, ಉಚಿತವಾಗಿ ಸಿಗುವ ಸೀತಾಫಲ ಹಣ್ಣು ನಗರ ಪ್ರದೇಶಗಳಲ್ಲಿ ಮಾರಾಟ ಮಾಡಿ ಅನೇಕರು ತಮ್ಮ ಕುಟುಂಬಗಳ ನಿರ್ವಹಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ…




