ಆಪರೇಷನ್ ಹಸ್ತ ಇಲ್ಲ, ಸಂಘಟನೆಗೆ ನಮ್ಮ ಒತ್ತು: ಸಲೀಮ್ ಅಹ್ಮದ್

ಬೆಳಗಾವಿ: ಆಪರೇಷನ್ ಹಸ್ತದ ಬಗ್ಗೆ ಚರ್ಚೆ ಇಲ್ಲ. ನಮ್ಮಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಬೇರೆ ಪಕ್ಷದವರು ಬಂದರೆ ಸ್ವಾಗತ. ಆದರೆ ನಾವಾಗಿಯೇ ಆಪರೇಷನ್ ಹಸ್ತ ಮಾಡುತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕೊರೊನಾ ನಿರ್ವಹಣೆ ಮಾಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಮೂರನೇ ಅಲೆ ಬರುತ್ತದೆ ಎಂದು ಗೊತ್ತಿದ್ದರೂ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ಕೊರೊನಾ ಮೊದಲನೆಯ ಅಲೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಎಸಗಿದ್ದ ಸರಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿತ್ತು. ಎರಡನೇ ಅಲೆಯಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ತೋರಿಸಿ ಜನರ ದಿಕ್ಕು ತಪ್ಪಿಸಿದರು ಎಂದು ಅಸಮಾಧಾನ ಹೊರ ಹಾಕಿದರು. ಪ್ರಪಂಚದಲ್ಲಿ ಸುಳ್ಳು ಹೇಳುವ ವ್ಯಕ್ತಿಗೆ ಪ್ರಶಸ್ತಿ ಕೊಡಬೇಕಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬೇಕು. ಕಪ್ಪು ಹಣ ಹೊರ ತಂದು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಾಕಲಾಗುವುದು ಎಂದು ಹೇಳಿದ್ದರು. ಯಾರಿಗೂ ನಯಾಪೈಸೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರಕಾರ ಟೆಕ್ ಆಫ್ಆಗಿಲ್ಲ. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲಾಗಿದೆ. ಒಂದು ಬಾಗಿಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಢವಳಗಿರಿ ನಿವಾಸ, ಇನ್ನೊಂದು ಕೇಶ್ವಾಪುರ ನಿವಾಸ, ಮತ್ತೊಂದು ಹೈಕಮಾಂಡ್ ಇದರ ನಡುವೆ ಸರಕಾರ ಟೆಕ್ ಆಫ್ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಮಿತ್ ಶಾ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳುತ್ತಾರೆ ಇಲ್ಲ ಸಾಮೂಹಿಕ ನಾಯತ್ವದಲ್ಲಿ ಚುನಾವಣೆ ಎಂದು ಬಿಜೆಪಿಯವರ ಆಂತರಿಕ ಕಚ್ಚಾಟ ಆರಂಭವಾಗಿದ್ದು, ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ನವೆಂಬರ್ ತಿಂಗಳಲ್ಲಿ ರಾಜ್ಯದ ಪಂಚಾಯತಿಗಳಲ್ಲಿ ಕಮಿಟಿ ರಚನೆ ಮಾಡಬೇಕೆಂದು ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಬೂತಮಟ್ಟದಲ್ಲಿ ಸಂಘಟನೆಯನ್ನು ಬೆಳೆಸಬೇಕೆಂದು ಹೇಳಲಾಗಿದೆ.
ಪಕ್ಷ ಸಂಘಟನೆಯ ಜತೆ ಜತೆಗೆ ಸರಕಾರದ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ಮುಂಬರುವ ಜಿಪಂ, ತಾಪಂ ಹಾಗೂ ಸ್ಥಳೀಯ ವಿಧಾನಪರಿಷತ್ತಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಲಾಗಿದೆ. ಸ್ವಾತಂತ್ರ್ಯತೋತ್ಸದ ಅಂಗವಾಗಿ ಒಂದು ವರ್ಷಗಳ ಕಾಲ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಎಐಸಿಸಿ ಸೂಚನೆ ನೀಡಿದ್ದು, ಅದರಂತೆ ರಾಜ್ಯದಲ್ಲಿಯೂ ಆಚರಿಸಲಾಗುವುದು. ವಿಶೇಷವಾಗಿ ಗಾಂಧಿ ಜಯಂತಿಯ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.



