ಲಸಿಕೆಯಿಂದ ಕೋವಿಡ್ 3ನೇ ಅಲೆ ಪರಿಣಾಮಕಾರಿ ನಿಯಂತ್ರಣ- ಎಸ್.ಆರ್. ಉಮಾಶಂಕರ್

ದಾವಣಗೆರೆ: ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನಿಡುವುದರಿಂದ ಕೊರೊನಾ ನಿಯಂತ್ರಣ ಸಾಧ್ಯ. ತ್ವರಿತವಾಗಿ ಲಸಿಕೆ ನೀಡುವುದರಿಂದ ಮೂರನೇ ಅಲೆ ಮೊದಲೆರಡು ಅಲೆಗಳಷ್ಟು ಪರಿಣಾಮ ಬೀರಿಲ್ಲ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೊರೊನಾ ಪರಿಸ್ಥಿತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈರಸ್‍ಗಳು ಸಾಮಾನ್ಯವಾಗಿ ದಿನಕಳೆದಂತೆ ದುರ್ಬಲವಾಗುತ್ತವೆ. ತ್ವರಿತ ಗತಿಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡಿದ ಪರಿಣಾಮವಾಗಿ, ಮೂರನೆ ಅಲೆ ಹೆಚ್ಚು ಆತಂಕಕಾರಿಯಾಗಲಿಲ್ಲ. ಮುಂಬರುವ ದಿನಗಳಲ್ಲೂ ಕೊರೊನಾ ಇದೇ ರೀತಿ ದುರ್ಬಲವಾಗಿರಲಿ ಎಂದು ಆಶಿಸುವುದಾಗಿ ತಿಳಿಸಿದರು.
ಜನವರಿ 1ರ ನಂತರ 5 ವರ್ಷದೊಳಗಿನ 34 ಹಾಗೂ 6-18 ವರ್ಷದವರೆಗಿನ 2,062 ಮಕ್ಕಳಲ್ಲಿ ಕೊರೊನಾ ಕಂಡು ಬಂದಿದೆ. ಒಟ್ಟಾರೆ 6,492 ಜನರಲ್ಲಿ ಕೊರೊನಾ ದೃಢಪಟ್ಟಿದೆ. 18 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಕಂಡು ಬರುವ ಪ್ರಮಾಣ ಸರಾಸರಿ ಶೇ.20ರಷ್ಟಿದೆ. ಆದರೆ ಜಿಲ್ಲೆಯಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು ಶೇ.32 ರಷ್ಟಿದೆ. ಮೂರನೇ ಅಲೆ ಕಂಡು ಬಂದ ನಂತರ ಇದುವರೆಗೂ 1.06 ಲಕ್ಷ ಕೋವಿಡ್ ಟೆಸ್ಟ್ಗಳನ್ನ ನಡೆಲಾಗಿದೆ. 6,492 ಜನರಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಒಟ್ಟಾರೆ ಪಾಸಿಟಿವ್ ದರ ಶೇ.6.10 ಆಗಿದೆ. ಮೂರನೇ ಅಲೆಯಲ್ಲಿ 15 ಜನ ಸಾವನ್ನಪ್ಪಿದ್ದು, ಸಾವಿನ ದರ ಶೇ.0.23ರಷ್ಟಿದೆ ಎಂದರು.
ಕಳೆದ ಎರಡು ಅಲೆಗಳಂತೆ ಮೂರನೇ ಅಲೆಯಲ್ಲೂ ಪುರುಷರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ. 3,547 ಪುರುಷರು ಹಾಗೂ 2,910 ಮಹಿಳೆಯರಲ್ಲಿ ಕೋವಿಡ್ ಸೋಂಕು ದೃಡಪಟ್ಟಿದೆ. ಮೃತರಲ್ಲಿ 8 ಪುರುಷರು ಹಾಗೂ 7 ಮಹಿಳೆಯರಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿದಿನ 800 ಕೊರೊನಾ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಪ್ರತಿ ದಿನ ಅದಕ್ಕಿಂತಲು ಹೆಚ್ಚು ಟೆಸ್ಟ್ ಗಳನ್ನು ಮಾಡಲಾಗುತ್ತಿದೆ. ರ್ಯಾಂಡಮ್ ಟೆಸ್ಟ್ ನಿಲ್ಲಿಸಲಾಗಿದ್ದು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿರುವರನ್ನು ಮಾತ್ರ ಪರೀಕ್ಷೆಗೆ ಒಳಪಡಿಲಾಗುತ್ತಿದೆ ಎಂದರು.
ಕಳೆದ ವರ್ಷ 287 ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಈ ವರ್ಷ 11 ಜನರಿಗೆ ಡೆಂಗ್ಯೂ ಖಚಿತಪಟ್ಟಿದ್ದು, ಬೇಸಿಗೆಯ ಕಾಲದಲ್ಲಿ ಉದರ ಸಂಬಂಧದ ಸಮಸ್ಯೆಗಳು ಹೆಚ್ಚಿರುವುದರಿಂದ ಈ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ವೇಳೆ ಮಾತನಾಡಿದ ಲಸಿಕೆ ನೋಡಲ್ ಅಧಿಕಾರಿ ಡಾ. ಮೀನಾಕ್ಷಿ ಮೊದಲ ಡೋಸ್ ಲಸಿಕೆ ಶೇ.100ರಷ್ಟು ಪೂರ್ಣವಾಗಿದೆ. ಎರಡನೇ ಡೋಸ್ ಲಸಿಕೆ ಶೇ.92ರಷ್ಟು ನೀಡಲಾಗಿದೆ. 15-18 ವರ್ಷದವರೆಗಿನ ಶೇ.100ರಷ್ಟು ಮಕ್ಕಳಿಗೆ ಮೊದಲ ಹಾಗೂ ಶೇ.89ರಷ್ಟು ಮಕ್ಕಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 1.40 ಲಕ್ಷ ಡೋಸ್ ಲಸಿಕೆ ಲಭ್ಯವಿದೆ ಎಂದರು.




