ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿ ಜಲಮಂಡಳಿಗೂ ತಟ್ಟಿದ ಕೊರೊನಾ ಬಿಸಿ: ಶೇ. 90 ರಷ್ಟು ಬಾಕಿ ಉಳಿದ ನೀರಿನ ಶುಲ್ಕ

ಧಾರವಾಡ: ಕೊರೊನಾ ಮಹಾಮಾರಿಯು ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕರಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಹುದೊಡ್ಡ ಸಮಸ್ಯೆ ತಂದೊಡ್ಡುತ್ತಲೇ ಇದೆ. ಅಲ್ಲದೇ ಕೋವಿಡ್ ಸೋಂಕಿನಿಂದಾಗಿ ಹಾಗೂ ಲಾಕ್‌ಡೌನ್ ಎಫೆಕ್ಟ್ ನಿಂದಾಗಿ ಜಲಮಂಡಳಿ ಕೂಡ ಆರ್ಥಿಕ ಸಂಕಷ್ಟದಕ್ಕೆ ಸಿಲುಕಿದೆ. ಜಲಮಂಡಳಿಗೆ ಶೇಕಡ 90 ರಷ್ಟು ಬಳಕೆದಾರರಿಂದ ನೀರಿನ ಶುಲ್ಕ ಬಾಕಿ ಉಳಿದಿದ್ದು, ನೀರಿನ ಶುಲ್ಕ ಸಂಗ್ರಹಣೆಯಲ್ಲಿ ಜಲಮಂಡಳಿ ನೆಲ ಕಚ್ಚಿದೆ. ಸೋಂಕಿನ ಭಯದಿಂದ ಶುಲ್ಕ ಪಾವತಿಗೂ ಜನ ಹೊರ ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದ ಜಲಮಂಡಳಿ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಕಳೆ ಜೂನ ತಿಂಗಳಲ್ಲಿ ಶುಲ್ಕದ ರೂಪದಲ್ಲಿ ಬರಬೇಕಿದ್ದ 310.85 ಕೋಟಿಯಲ್ಲಿ ಇದುವರೆಗೆ ಸಂಗ್ರಹವಾಗಿರುವುದು ಕೇವಲ 31.15 ಕೋಟಿ, ಅಂದರೆ, ಶೇ 10.08ರಷ್ಟು ಮಾತ್ರ ಸಂಗ್ರಹವಾಗಿದ್ದು, ಶುಲ್ಕದಿಂದಲೇ ಸಿಬ್ಬಂದಿಯ ವೇತನ ಸೇರಿದಂತೆ ಹಲವು ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಮಂಡಳಿಗೆ ನಿರ್ವಹಣೆಯೇ ಸವಾಲಾಗಿದೆ‌.

ನೀರಸಾಗರ ಜಲಾಶಯ ಮತ್ತು ಮಲಪ್ರಭಾ ಜಲಾಶಯ ಸೇರಿ ಹುಬ್ಬಳ್ಳಿಗೆ ನಿತ್ಯ 140 ಎಂಎಲ್‌ಡಿ (ದಶಲಕ್ಷ ಲೀಟರ್‌) ನೀರು ಪೂರೈಕೆ ಮಾಡಲಾಗುತ್ತದೆ. ಇದರಲ್ಲಿ 126 ಎಂಎಲ್‌ಡಿ ಗೃಹ ಬಳಕೆಗೆ, 10 ಎಂಎಲ್‌ಡಿ ಬಲ್ಕ್ ಬಳಕೆಗೆ ಹಾಗೂ 4.5 ಎಂಎಲ್‌ಡಿ ವಾಣಿಜ್ಯ ಮತ್ತು ಗೃಹಯೇತರ ಉದ್ದೇಶಕ್ಕೆ ಬಳಕೆಗೆ ವಿನಿಯೋಗಿಸಲಾಗುತ್ತದೆ. ಹೊರಗುತ್ತಿಗೆಯವರೂ ಸೇರಿದಂತೆ ಮಂಡಳಿಯಲ್ಲಿ ಒಟ್ಟು 300 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಸಂಬಳವೂ ಶುಲ್ಕದ ಹಣದಲ್ಲೇ ಆಗಬೇಕಿದೆ.

ಸದ್ಯ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವವರ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಬಾಕಿಯಿದೆ. ಈಗ ಲಾಕ್‌ಡೌನ್ ಸಡಿಲಗೊಂಡಿರುವುದರಿಂದ ಶುಲ್ಕ ಸಂಗ್ರಹ ಯಥಾಸ್ಥಿತಿಗೆ ಬಂದರೆ, ಎಲ್ಲವೂ ಸರಿಹೋಗುವ ನಿರೀಕ್ಷೆಯಲ್ಲಿ ಜಲಮಂಡಳಿ ಇದೆ.

Spread the love

Related Articles

Leave a Reply

Your email address will not be published. Required fields are marked *

Back to top button