ಹಾರಂಗಿ ಜಲಾಶಯಕ್ಕೆ ಸಚಿವ ಸೋಮಣ್ಣ ಬಾಗಿನ ಅರ್ಪಣೆ

ಮಡಿಕೇರಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಶುಕ್ರವಾರ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಉಸ್ತುವಾರಿ ಸಚಿವರು, 2020-21ನೇ ಸಾಲಿನಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಹಾರಂಗಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ್ದೇವೆ. ಹಾರಂಗಿ ಜಲಾಶಯದಿಂದ ಮಡಿಕೇರಿ ಕುಶಾಲನಗರ ನಗರ ಸೇರಿದಂತೆ ಹುಣಸೂರು, ಪಿರಿಯಾಪಟ್ಟಣ, ಅರಕಲಗೂಡು ಮತ್ತು ಕೆ ಅರ್ ನಗರ ಸೇರಿದಂತೆ ಸುಮಾರು 5 ತಾಲ್ಲೂಕಿನ ಸುಮಾರು 161000 ಹೆಕ್ಟೇರ್ ಪ್ರದೇಶಕ್ಕೆ ನೀರು ಸರಬರಾಜು ಆಗುತ್ತಿದೆ. ಮತ್ತು ಅಧಿಕ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ನೆನ್ನೆ ಜಲಾಶಯ ತುಂಬಲು ಎರೆಡು ಅಡಿ ನೀರಿನ ಅವಶ್ಯಕತೆ ಇತ್ತು, ಆದರೂ ಪರಿಸ್ಥಿತಿಯನ್ನು ಅವಲೋಕಿಸಿ ಇಂದು ಬಾಗೀನ ಅರ್ಪಿಸಿದ್ದೇವೆ ಎಂದರು.
ಯಡಿಯೂರಪ್ಪ ಅವರ ಸರ್ಕಾರ ಬಂದು ಎರಡು ವರ್ಷಗಳಾಗಿದ್ದು, ಈ ಎರೆಡು ವರ್ಷಗಳಲ್ಲಿ ಯಾವುದೇ ರೀತಿಯ ಬರಗಾಲ ಕಂಡು ಬರದೇ ನಮ್ಮ ಸರ್ಕಾರಕ್ಕೆ ಪ್ರಕೃತಿ ಮಾತೆ ಆಶಿರ್ವದಿಸಿದೆ ಎಂದರು. ಅತಿವೃಷ್ಟಿ ಇದ್ದರೂ ಜಲಾಶಯ ಭರ್ತಿಯಾಗಿದೆ ಎಂದು ತಿಳಿಸಿದರು.
ನಂತರ ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗೆ ನೀರು ಒದಗಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯು ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಎ.ಟಿ.ರಾಮಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹಾರಂಗಿ ಜಲಾಶಯದ ಎಂಜಿನಿಯರ್ ಗಳು ಇತರರು ಇದ್ದರು.
