15ಕ್ಕೂ ಹೆಚ್ಚು ದುರಹಂಕಾರಿ ಸಚಿವರನ್ನು ವಜಾಗೊಳಿಸಿ: ರೇಣುಕಾಚಾರ್ಯ

ದಾವಣಗೆರೆ: ಶಾಸಕರಿಗೆ ಸುಳ್ಳು ಹೇಳಿಕೊಂಡು, ಜನರ ಕೈಗೆ ಸಿಗದ 15ಕ್ಕೂ ಹೆಚ್ಚು ದುರಹಂಕಾರಿ ಸಚಿವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ. ದುರಹಂಕಾರಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದೇನೆ.
ಸ್ಪಂದಿಸುವ ಹಾಗೂ ಸ್ಪಂದಿಸದ ಸಚಿವರ ಪಟ್ಟಿಯನ್ನೂ ನೀಡಿದ್ದೇನೆ. ಆದ್ರೆ ನಾನು ಲಿಖಿತ ದೂರು ಕೊಟ್ಟಿಲ್ಲ, ಕೊಡುವುದೂ ಇಲ್ಲ.ನಾನು ಕರೆ ಮಾಡಿ ಈಗಾಗಲೇ ಸಿಎಂ, ನಳೀನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ ಎಂದರು.
ನಾನು ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಸಚಿವ, ಶಾಸಕ ಸ್ಥಾನ ದೊಡ್ಡದಲ್ಲ. ಪಕ್ಷದ ಕಾರ್ಯಕರ್ತ ಎನ್ನೋದೇ ದೊಡ್ಡ ಹೆಮ್ಮೆ. 15 ಕ್ಕೂ ಹೆಚ್ಚು ದುರಹಂಕಾರಿ ಸಚಿವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಅನೇಕ ಬಾರಿ ಹೇಳಿದ್ದೇನೆ. ಕಳೆದ 27ರಂದು ಕರೆ ಬಂದಿದೆ. ಅನೇಕ ಶಾಸಕರು ನನ್ನ ಮುಂದೆ ಭಾವನೆ ವ್ಯಕ್ತಪಡಿಸಿದ್ದಾರೆ. ಕೆಲ ಸಚಿವರು ಕೈಗೆ ಸಿಗ್ತಾ ಇಲ್ಲ, ಫೋನ್ ರಿಸೀವ್ ಮಾಡಲ್ಲ. ಮಾಡಿದರೂ ಸಚಿವರ ಆಪ್ತ ಸಹಾಯಕರು ಸ್ವೀಕರಿಸುತ್ತಾರೆ. ಏನಾದರೂ ಕೆಲಸಕ್ಕೆ ಪತ್ರ ಬರೆದರೆ ಕಾನೂನಾತ್ಮಕ ಪರಿಶೀಲನೆ ಮಾಡುತ್ತೇವೆ ಎಂಬ ಸಬೂಬು ಬರುತ್ತದೆ. ಇದು ಶಾಸಕರ ಕ್ಷೇತ್ರಕ್ಕೆ ಮಾಡಿದ ಅಪಮಾನ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಹೇಳಿದ್ದೇನೆ ಎಂದರು.
ಒಬ್ಬ ಸಚಿವರಿಗೆ ಎರಡರಿಂದ ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಪ್ತ ಸಹಾಯಕನಿಗೆ ಕರೆ ಮಾಡಿದರೆ ಕೋವಿಡ್ ಬಂದಿದೆ, ಕ್ವಾರಂಟೈನ್ ನಲ್ಲಿ ಇದ್ದಾರೆ ಎನ್ನುತ್ತಾರೆ. ಕೊರೊನಾ ಬಂದವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಕ್ವಾರಂಟೈನ್ ಆದವರು ಹೇಗೆ ಬಂದರು ಎಂದು ಆಪ್ತ ಕಾರ್ಯದರ್ಶಿ ಮೇಲೆ ರೇಗಾಡಿದೆ ಎಂದು ಹೇಳಿದರು.




