ಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರಸುದ್ದಿ

ದೇವನಹಳ್ಳಿ: ಶಾಕ್ ಹೊಡೆಯುತ್ತಿರುವ ವಿದ್ಯುತ್ ಕಂಬ, ಸ್ಥಳೀಯರಲ್ಲಿ ಆತಂಕ

ದೇವನಹಳ್ಳಿ: ಕುಂದಾಣ ಹೋಬಳಿಯ ಬೀರಸಂದ್ರ ಗ್ರಾಮದ ರಸ್ತೆಬದಿಯಲ್ಲಿರುವ ಕಬ್ಬಿಣದ ವಿದ್ಯುತ್ ಕಂಬವೊಂದರಲ್ಲಿ ವಿದ್ಯುತ್ ಹರಿಯುತ್ತಿದ್ದು, ಯಾರಾದರೂ ಮುಟ್ಟಿದರೆ ಶಾಕ್ ಹೊಡೆಯುತ್ತಿದೆ. ಈ ವಿದ್ಯುತ್ ಕಂಬ ನಿರ್ವಹಣೆಯಿಲ್ಲದೆ ಎರಡು ವರ್ಷದಿಂದ ತುಕ್ಕು ಹಿಡಿದಿದೆ. ಈಗ ತಂತಿಯಿಂದ ವಿದ್ಯುತ್ ಸ್ಪರ್ಶಿಸಿ ಕಂಬದಲ್ಲಿ ಹರಿಯುತ್ತಿರುವ ಪರಿಣಾಮ ಅಪಾಯಕಾರಿಯಾಗಿ ಪರಿಣಮಿಸಿದೆ.

ಬೀರಸಂದ್ರ ಗ್ರಾಮದ ಮಧ್ಯೆ ಭಾಗದಲ್ಲಿ ರಸ್ತೆಗೆ ಹೊಂದಿಕೊಂಡು ಈ ವಿದ್ಯುತ್ ಕಂಬವಿದೆ. ಇಲ್ಲಿ ಪ್ರತೀನಿತ್ಯ ಶಾಲಾಮಕ್ಕಳು, ವಯೋವೃದ್ಧರ ಸಹಿತ ಸಾರ್ವಜನಿಕರು ಸಂಚರಿಸುತ್ತಾರೆ. ಆಕಸ್ಮಿಕವಾಗಿ ಕಂಬವನ್ನು ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುತ್ತಿದ್ದು, ಇದರಿಂದ ಇಲ್ಲಿ ಸಂಚರಿಸುವವರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗುವಂತಹ ಪರಿಸ್ಥಿತಿಯಾಗಿದೆ.

ಇಂತಹ ಅಪಾಯಕಾರಿ ವಿದ್ಯುತ್ ಕಂಬವನ್ನು ಬದಲಾಯಿಸಬೇಕೆಂದು ಗ್ರಾಮಸ್ಥರು ಹಲವು ಬಾರಿ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಅವರು ಈ ಬಗ್ಗೆ ನಿರ್ಲಕ್ಷ ವಹಿಸುತ್ತಲೇ ಬಂದಿದ್ದಾರೆಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಸಹಾಯಕ ಇಂಜಿನಿಯರ್ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಅವರು ಕ್ಯಾರೇ ಎನ್ನುತ್ತಿಲ್ಲ.

ಅಪಾಯಕಾರಿಯಾಗಿರುವ ಈ ಕಬ್ಬಿಣದ ವಿದ್ಯುತ್ ಕಂಬದಿಂದ ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಸಂಭವಿಸುವ ಮೊದಲು ಕಂಬವನ್ನು ಬದಲಾಯಿಸಬೇಕು. ಇಲ್ಲವಾದಲ್ಲಿ ಮುಂದೆ ಸಂಭವಿಸಬಹುದಾದ ಅನಾಹುತಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಸ್ಥಳೀಯರಾದ ರವಿ, ರಾಜಣ್ಣ, ಹನುಮಂತ, ರಾಜೇಶ್, ತೇಜೇಶ್, ಚಿಕ್ಕಣ್ಣ ಮುಂತಾದವರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button