ಪಾದಯಾತ್ರೆಯಲ್ಲ, ಒಮಿಕ್ರಾನ್ ಜಾತ್ರೆ; ಎಚ್ಚರತಪ್ಪಿದರೆ ಸೋಂಕಿನ ಸಮಾರಾಧನೆ: ಹೆಚ್ಡಿಕೆ ವಾಗ್ದಾಳಿ

ಬೆಂಗಳೂರು: ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ಒಮಿಕ್ರಾನ್ ಜಾತ್ರೆಯನ್ನಾಗಿ ಪರಿವರ್ತಿಸಿದೆ. ನೀರಿನ ಹೆಸರಲ್ಲಿ ಅದು ನಡೆಸಿರುವ ದೊಂಬರಾಟವನ್ನು ಸರ್ಕಾರ ಕೂಡಲೇ ಕ್ರಮ ಕೈಗೊಂಡ ನಿಲ್ಲಿಸಬೇಕ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೋವಿಡ್ ಸೋಂಕು ಎಲ್ಲೆಲ್ಲೂ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಜನರ ಆರೋಗ್ಯ-ಜೀವದ ಲೆಕ್ಕವಿಲ್ಲದ ರಾಜಕೀಯಕ್ಕಾಗಿ ಈ ಯಾತ್ರೆ ಕೈಗೊಂಡಿದೆ ಎಂದು ಅವರು ಕಿಡಿಕಾರಿದ್ದಾರೆ.
ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯ ಬಗ್ಗೆ ಬಗ್ಗೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡಲೇ ಪಾದಯಾತ್ರೆ ನಿಲ್ಲಿಸಬೇಕು. ಒಂದು ವೇಳೆ ಅವರು ನಿಲ್ಲಿಸದಿದ್ದರೆ ಸರಕಾರವೇ ಕಠಿಣ ಕ್ರಮ ಕೈಗೊಂಡು ತಡೆಯಬೇಕು ಎಂದೂ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹತ್ತು ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ. “ಮೇಕೆದಾಟು ಪಾದಯಾತ್ರೆಯನ್ನು ʼಓಮಿಕ್ರಾನ್ ಜಾತ್ರೆʼಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರಿದ ಸರಕಾರಕ್ಕೂ ಚಾಟಿ ಬೀಸಿದೆ. ಸರಕಾರವು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನೀರಿನ ಹೆಸರಿನಲ್ಲಿ ನಡೆಯುತ್ತಿರುವ ಈ ದೊಂಬರಾಟ ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ರಾಜ್ಯವ್ಯಾಪಿ ಕೋವಿಡ್ ವಿಜೃಂಭಿಸುತ್ತಿದೆ. ಸೋಂಕು ವೇಗವಾಗಿ ಹರಡುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರಿಗೆ ಪಾಸಿಟವ್ ಆಗಿ ಅವರು ಆಸ್ಪತ್ರೆ ಸೇರಿಕೊಳ್ಳುತ್ತಿದ್ದಾರೆ. ಪರೀಕ್ಷೆ ನಡೆಸಿದರೆ ದೊಡ್ಡ ಸಂಖ್ಯೆಯ ಜನರು ಸೋಂಕಿತರಾಗಿರುವುದು ಪತ್ತೆಯಾಗುತ್ತದೆ” ಎಂದಿದ್ದಾರೆ.
ಸೋಂಕಿನ ಸಮಾರಾಧನೆ!
“ನ್ಯಾಯಾಲಯದಿಂದ ಮತ್ತೆ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಪರಿಸ್ಥಿತಿ ಕೈಮೀರಿದೆ. ಎಚ್ಚರ ತಪ್ಪಿದರೆ ಇರುವ ಆಸ್ಪತ್ರೆಗಳು, ವೈದ್ಯ ವ್ಯವಸ್ಥೆ ಸಾಲುವುದಿಲ್ಲ. ಕಳೆದ 4 ದಿನಗಳಿಂದ ಬಸ್ಸುಗಳಲ್ಲಿ ಜನರನ್ನು ಕರೆಸಿಕೊಂಡು ನಡೆಸುತ್ತಿರುವ ಈ ಜಾತ್ರೆಯಿಂದ ಮೇಕೆದಾಟು ಸಾಕಾರ ಅಸಾಧ್ಯ. ಇದು ʼಸೋಂಕಿನ ಸಮಾರಾಧನೆʼಯಷ್ಟೇ! ಎಂದು ವಾಗ್ಪ್ರಾಹಾರ ನಡೆಸಿದ್ದಾರೆ.
“ಮೇಕೆದಾಟು ಬಗ್ಗೆ ಏನೇನು ಮಾಡಲಾಗಿದೆ ಎಂದು ಸರಕಾರ ಜಾಹೀರಾತು ನೀಡಿದೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳೂ ಜಾಹೀರಾತು ಕೊಟ್ಟುಕೊಂಡು ಸಮಜಾಯಿಷಿ ನೀಡಿವೆ. ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವ ಲೆಕ್ಕವನ್ನು ನಾನು ಜನರ ಮುಂದೆ ಇಡುತ್ತೇನೆ. 1924ರಿಂದ ಕಾವೇರಿ ವಿಷಯದಲ್ಲಿ ಏನೆಲ್ಲಾ ನಡೆಯಿತು? ರಾಜ್ಯಕ್ಕೆಷ್ಟು ಅನ್ಯಾಯ ಆಯಿತು ಎಂಬುದನ್ನು ಮುಂದೆ ಚರ್ಚೆ ಮಾಡುತ್ತೇನೆ” ಎಂದಿದ್ದಾರೆ.
ಜೆಡಿಎಸ್ ಗೆ ಆತಂಕವಿಲ್ಲ
“ಕಾಂಗ್ರೆಸ್ ಪಾದಯಾತ್ರೆಯಿಂದ ನಮ್ಮ ಪಕ್ಷಕ್ಕೇನು ಆತಂಕವಿಲ್ಲ. ಆದರೆ ಜನ ಆರೋಗ್ಯದ ಆತಂಕದಲ್ಲಿದ್ದಾರೆ. ಹಾಗಂತ, ಇವರ ಯಾತ್ರೆ ಬಗ್ಗೆ ಅಥವಾ ನಾಡಿನ ಪರ ದನಿಯೆತ್ತುವ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಕೋವಿಡ್ ಅಟ್ಟಹಾಸದ ಹೊತ್ತಿನಲ್ಲಿ ಇದು ಖಂಡಿತಾ ಬೇಕಿರಲಿಲ್ಲ” ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
“ಗಾಂಧೀಜಿ ಅವರ ಪಾದಯಾತ್ರೆ ಬಗ್ಗೆ ಓದಿದ್ದೇನೆ. ವಿನೋಬಾ ಭಾವೆ ಅವರ ಪಾದಯಾತ್ರೆ ಬಗ್ಗೆ ಅರಿತಿದ್ದೇನೆ. ದೇವೇಗೌಡರ ಪಾದಪಾತ್ರೆಯನ್ನು ಕಣ್ಣಾರೆ ಕಂಡಿದ್ದೇನೆ. ಆದರೆ, ಇಂಥ ʼಹೈಟೆಕ್ ಪಾದಯಾತ್ರೆʼಯನ್ನು ನೋಡಿರಲಿಲ್ಲ. ಇಂಥ ದೊಂಬರಾಟದಿಂದ ಕಾನೂನಿನ ವ್ಯಾಪ್ತಿಯಲ್ಲಿರುವ ಮೇಕೆದಾಟು ಯೋಜನೆ ಜಾರಿ ಸಾಧ್ಯವಿಲ್ಲ” ಎಂದೂ ಹೇಳಿದ್ದಾರೆ.
ಗಂಡಸ್ತನ ತೋರಿಸಬೇಡಿ
“ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್ ನಾಯಕರು ಪಕ್ಷದ ಸಂಘಟನೆ ಮಾಡಿಕೊಳ್ಳಲಿ. ಕೋವಿಡ್ ಇಳಿಮುಖವಾದ ನಂತರ ಅದನ್ನು ಮಾಡಲಿ. ಅದನ್ನು ಬಿಟ್ಟು ಜನರ ಜೀವದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕಾಂಗ್ರೆಸ್ ಒಂದು ಜವಾಬ್ದಾರಿ ಪಕ್ಷವಾಗಿದ್ದರೆ ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಗಂಡಸ್ತನ ತೋರಿಸುವುದಕ್ಕೆ ಹೋಗಿ ʼಮೇಕೆದಾಟನ್ನು ಮಸಣʼ ಮಾಡುವುದು ಬೇಡ” ಎಂದು ಸಲಹೆ ನೀಡಿದ್ದಾರೆ.
“ಕಳೆದ 4 ದಿನಗಳಿಂದ ಸರಕಾರ ತೋರಿದ ಉದಾರತೆ ಸಾಕು. ಇನ್ನೂ ಔದಾರ್ಯ ತೋರಿದರೆ ರಾಜ್ಯದ ಅವನತಿಗೆ ದಾರಿಯಾದೀತು. ಕೋವಿಡ್ ನಿಯಮ ಪಾಲಿಸುವಂತೆ ಜನರಿಗೆ ಹಿಂಸೆ ಕೊಟ್ಟು, ರಾಜಕಾರಣಿಗಳಿಗೆ ವಿನಾಯಿತಿ ಕೊಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಸರಕಾರ ಕೆಚ್ಚೆದೆಯ ಕ್ರಮ ಕೈಗೊಳ್ಳಬೇಕು” ಎಂದೂ ಕುಮಾರಸ್ವಾಮಿ ಆಒತ್ತಾಯಿಸಿದ್ದಾರೆ.
