ದಕ್ಷಿಣ ಕನ್ನಡ

ಬಂಗ ಅರಸರ ಕಾಲದ ಅಪರೂಪದ ಶಾಸನ ಪತ್ತೆ

ಮಂಗಳೂರು: ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದಲ್ಲಿನ ಅನ್ನಪಾಡಿ ಬಾಲಗಣಪತಿ ದೇಗುಲದ ಸಮೀಪದ ತೋಟವೊಂದರಲ್ಲಿ 15ನೇ ಶತಮಾನದ ಬಂಗ ಅರಸರ ಕಾಲದ ಶಾಸನ ಪತ್ತೆಯಾಗಿದೆ.

ದಿ. ಮೋನಪ್ಪ ಪೂಜಾರಿ ಎಂಬವರ ತೋಟದಲ್ಲಿದ್ದ ಈ ಶಾಸನವನ್ನು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಹಾಗೂ ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಅವರುಗಳು ಪತ್ತೆ ಮಾಡಿ, ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರಕ್ಕೆ ಮಾಹಿತಿ ನೀಡಿದಾಗ ಅಧ್ಯಯನ ನಿರ್ದೇಶಕ ಪ್ರೊ.ಎಸ್ಎ.ಕೃಷ್ಣಯ್ಯ ಅವರ ಮಾರ್ಗದರ್ಶನದಂತೆ, ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೃತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಾಸನದ ಅಕ್ಷರಗಳನ್ನು ಓದಿ ಅರ್ಥೈಸಿದ್ದಾರೆ.

ಕರ್ನಾಟಕದ ಇತಿಹಾಸದ ಶಾಸನಗಳಲ್ಲಿ ಪುರುಷಾಮೃಗದ ಕೆತ್ತನೆ ಪತ್ತೆಯಾಗಿರುವುದು ಇದೇ ಮೊದಲು ಎಂದು ಸಂಶೋಧಕರು ಹೇಳಿದ್ದು, ಇದು ಜೈನ ಮನೆತನದ ಬಂಗ ಅರಸರಿಗೆ ಸೇರಿದ್ದಾಗಿದೆ. ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾದ ಈ ಶಾಸನವು 75 ಸೆಂ.ಮೀ ಅಗಲ, 138 ಸೆಂ ಮೀ ಎತ್ತರವಿದೆ. ಶಾಸನದಲ್ಲಿ ಮೊದಲಿಗೆ ಸೂರ್ಯ ಚಂದ್ರರ ಚಿತ್ರದ ನಡುವೆ ಪ್ರಭಾವಳಿ ಸಹಿತ ಶಿವಲಿಂಗ ಹಾಗೂ ಇದರ ಬಲಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ಪುರುಷಾಮೃಗದ ಚಿತ್ರ ಮತ್ತು ಎಡಭಾಗದಲ್ಲಿ ನಂದಿಯ ಚಿತ್ರವಿದೆ. ಜಯಾಭ್ಯುದಯ ಶಾಲಿವಾಹನ ಶಕಪುರುಷ 1405ನೆಯ ಶೋಭಕೃತ ಸಂವತ್ಸರತದ ಜೇಷ್ಟ ಶುದ್ಧ1 ಬುಧವಾರ ಎಂದು ಉಲ್ಲೇಖವಿದ್ದು, ಕ್ರಿ.ಶ.1483 ಕಾಲದ್ದೆಂದು ತಿಳಿಯಲಾಗಿದೆ.

ಶಾಸನದಲ್ಲಿ 17 ಸಾಲುಗಳಲ್ಲಿ ಬರೆಯಲಾಗಿದೆ. ಬಂಗ ದೊರೆ ಪಾಂಡ್ಯಪ್ಪರಸನ ಅಳಿಯ ಲಕ್ಷ್ಮಪ್ಪರಸ ಒಡೆಯನು ಯಿಚಿಲದ ಮಠಕ್ಕೆ ಚಂದ್ರಗ್ರಹಣದ ಸಮಯದಲ್ಲಿ ಬರೆಸಿ ಕೊಟ್ಟಂತಹ ದಾನ ಶಾಸನವಿದು. ಈ ಮಠಕ್ಕೆ ಅಕ್ಕಿಯ ನೈವೇದ್ಯಕ್ಕೆ 33 ಕಾಟಿ ಗದ್ಯಾಣಗಳನ್ನು ಧಾರಾಪೂರ್ವಕವಾಗಿ ಕೊಟ್ಟಂತಹ ದಾನವನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಕೊನೆಯಲ್ಲಿ ಶಾಪಾಶಯ ವಾಕ್ಯವಿದೆ.

Spread the love

Related Articles

Leave a Reply

Your email address will not be published. Required fields are marked *

Back to top button