ಉದ್ಯೋಗದ ಹೆಸರಲ್ಲಿ ವಂಚನೆ; ಆರೋಪಿ ಸೆರೆ
ಮಂಗಳೂರು: ಹೊರದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ.ಗಳ ಪಡೆದು ಮಾಡುತ್ತಿದ್ದ ಆರೋಪಿಯೋರ್ವ ನಗರ ಪೊಲೀಸರಿಗೆ ಸೆರೆಯಾಗಿದ್ದಾನೆ.
ಬಲ್ಮಠದ ನಿವಾಸಿ ಜೆರಿ ಇಥಿಯಲ್ ಸಿಖಾ (32) ಎಂಬಾತ ವಿದೇಶದಲ್ಲಿ ನರ್ಸಿಂಗ್ ಉದ್ಯೋಗಕ್ಕಾಗಿ ಕಾವೂರಿನ ಮಹಿಳೆಯೊಬ್ಬರು ವಿಚಾರಿಸಿದಾಗ, ಯುರೋಪ್‌ನ ಲಿಥುವೇನಿಯಾ ದೇಶದಲ್ಲಿ ಕಚೇರಿಯಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ. ತಿಂಗಳಿಗೆ 3.5 ಲಕ್ಷ ರೂ. ವೇತನ ಸಿಗಲಿದೆ. ಆ ಉದ್ಯೋಗದ ವೀಸಾಕ್ಕೆ ಒಟ್ಟು 5.5 ಲಕ್ಷ ರೂ. ವೆಚ್ಚ ತಗುಲುವುದಾಗಿ ಆರೋಪಿಯು ಮಹಿಳೆಗೆ ತಿಳಿಸಿದ್ದಾನೆ.
ಈತನನ್ನು ನಂಬಿದ ಮಹಿಳೆ ತನ್ನ ಚಿನ್ನಾಭವರಣ ಅಡವಿಟ್ಟು 1 ಲಕ್ಷ ರೂ. ನಗದನ್ನು ನೇರವಾಗಿ ಹಾಗೂ 1 ಲಕ್ಷ ರೂ.ನ್ನು ನೆಫ್ಟ್ ಮೂಲಕ ಆರೋಪಿಯ ಕಚೇರಿಯ ಬ್ಯಾಂಕ್ ಖಾತೆಗೆ ಪಾವತಿಸಿದ್ದಾರೆ. ನಂತರ ಮಹಿಳೆಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಆರೋಪಿಯ ಸಂಸ್ಥೆಗೆ ಯಾವುದೇ ಪರವಾನಗಿಯಿಲ್ಲ ಎಂಬುದು ಗೊತ್ತಾಗಿದೆ. ಈ ವೇಳೆ ಹಣ ವಾಪಸ್ ಮಾಡಲು ಕೇಳಿದಾಗ ಆರೋಪಿ ನಿರಾಕರಿಸಿದ್ದು, ಮಹಿಳೆ ಬಂದರು ಠಾಣೆಗೆ ದೂರು ನೀಡಿದ್ದರು.
ಅಲ್ಲದೆ ಆರೋಪಿಯಿಂದ ವಂಚನೆಗೊಳಗಾದ ಮತ್ತಿಬ್ಬರು ಸಂತ್ರಸ್ತರು ದೂರು ನೀಡಿದ್ದು ಈ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಈಗಾಗಲೇ ವಿದೇಶಿ ಉದ್ಯೋಗ ನೇಮಕಾತಿ ಏಜೆನ್ಸಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಉದ್ಯೋಗದ ನಂಬಿಕೆ ಹುಟ್ಟಿಸಿ ವಂಚಕ ಕೆಲಸ ಮಾಡುವವರು ಹೆಚ್ಚಾಗಿದ್ದಾರೆ. ಈ ರೀತಿ ವಂಚನೆಗೊಳಗಾದವರು ನೇರವಾಗಿ ಪೊಲೀಸರಿಗೆ ದೂರು ನೀಡಬಹುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.




