ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ ರಕ್ಷಿಸಿದ ಯುವಕರ ಕಾರ್ಯಕ್ಕೆ ಮೆಚ್ಚುಗೆ!!

ಬಾಗಲಕೋಟೆ: ಮಲಪ್ರಭಾ ನದಿಗೆ ಹಾರಿದ್ದ ವೃದ್ಧೆಯನ್ನು ಬಾದಾಮಿ ತಾಲೂಕಿನ ಮಂಗಳೂರು ಗ್ರಾಮದ ಯುವಕರು ರಕ್ಷಿಸಿ ವೃದ್ಧೆಯ ಜೀವ ಉಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಸೇತುವೆ ಬಳಿಯ ಮಲಪ್ರಭಾ ನದಿಗೆ ವೃದ್ಧೆ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಳು. ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಮಂಗಳೂರು ಗ್ರಾಮದ ಯುವಕರು ವೃದ್ಧೆ ನದಿಗೆ ಹಾರಿದ್ದನ್ನು ಗಮನಿಸಿ, ನದಿಯಲ್ಲಿ ಈಜಿ ವೃದ್ಧೆಯನ್ನು ಸುರಕ್ಷತವಾಗಿ ಹೊರಗೆ ಕರೆತಂದಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ವೃದ್ದೆಯಾಗಿದ್ದು, ಸೊಸೆಯಂದಿರ ಕಾಟ ತಾಳಲಾರದೇ ಮನೆಬಿಟ್ಟು ಬಂದಿದ್ದಾಳೆ. ಬಾದಾಮಿ ತಾಲೂಕಿಗೆ ಆಗಮಿಸಿ ಮಲಪ್ರಭಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಹಾರಿದ್ದಳು. ಯುವಕರು ವೃದ್ಧೆಯನ್ನು ರಕ್ಷಿಸಿ ಹೊರತಂದ ವೇಳೆ ವೃದ್ಧೆಯನ್ನು ವಿಚಾರಿಸಿದ ವೇಳೆ ತನ್ನ ಗೋಳು ತೋಡಿಕೊಂಡಿದ್ದಾಳೆ.
ಇನ್ನು ವೃದ್ಧೆಯ ತಲೆಗೆ ಪೆಟ್ಟಾಗಿದೆ.ಯುವಕರು ವೃದ್ಧೆಯನ್ನು ಶಿವಯೋಗ ಮಂದಿರಕ್ಕೆ ಬಿಟ್ಟು ಬಂದಿದ್ದು, ನದಿಯಲ್ಲಿ ವೃದ್ಧೆಯನ್ನು ರಕ್ಷಿಸಿದ ರವಿ, ಪವನ್ ಸೇರಿದಂತೆ ಐದಾರು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.




