ಹೆಂಡತಿ ಕರೆಯಲು ಬಂದು ಮಾವನ ಮೇಲೆ ಹಲ್ಲೆ : ಆಸ್ಪತ್ರೆ ಸೇರಿದ ಹೆಣ್ಣು ಕೊಟ್ಟ ಮಾವ

ಧಾರವಾಡ : ಹೆಂಡತಿಯನ್ನು ಜೊತೆಗೆ ಕಳುಹಿಸಲು ನಿರಾಕರಿಸಿದ ಕಾರಣಕ್ಕಾಗಿ ಸಿಟ್ಟಿಗೆದ್ದ ಪಾಪಿ ಅಳಿಯನೊಬ್ಬ, ಹೆಣ್ಣು ಕೊಟ್ಟ ಮಾವನ ಕತ್ತು ಸೀಳಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.
ಶಿವಪ್ಪ ದಳವಾಯಿ ಎಂಬಾತನೇ ಅಳಿಯನ ಕೋಪಕ್ಕೆ ತುತ್ತಾದ ವ್ಯಕ್ತಿಯಾಗಿದ್ದಾನೆ. ಶಿವಪ್ಪ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜಗದೀಶ್ ಕಂಬಳಿ ಎಂಬಾತನಿಗೆ, ಶಿವಪ್ಪ ದಳವಾಯಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದ. ಆದರೆ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಪತ್ನಿ ತವರು ಮನೆ ಸೇರಿದ್ದಳು. ಹಳ್ಳಿಕೇರಿಯಲ್ಲಿಯೇ ಉಳಿದುಕೊಂಡಿದ್ದ ಪತ್ನಿಯನ್ನು ಕರೆಯಲೆಂದು ಅಳಿಯ ಜಗದೀಶ್ ಕಂಬಳಿ ಕರೆಯಲು ಕರೆಯಲು ಗ್ರಾಮಕ್ಕೆ ಬಂದಿದ್ದಾನೆ. ಈ ವೇಳೆ ಹೆಂಡತಿಯ ಮನೆ ಮುಂದೆ ನಿಂತು ಅಸಭ್ಯವಾಗಿ ವರ್ತಿಸಿ, ಬಾಯಿಗೆ ಬಂದಂತೆ ಬೈಯಲು ಆರಂಭಿಸಿದ ಎಂದು ಹೇಳಲಾಗಿದೆ.
ಇದರಿಂದ ಅಸಮಾಧಾನಗೊಂಡ ಶಿವಪ್ಪ ತನ್ನ ಮಗಳನ್ನು ಕಳುಹಿಸಲು ನಿರಾಕರಿಸಿದ್ದಾನೆ. ಅಳಿಯ ಮತ್ತು ಮಾವನ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಆಗ ಸಿಟ್ಟಿಗೆದ್ದ ಜಗದೀಶ್ ಕಂಬಳಿ ಬ್ಲೇಡ್ ನಿಂದ ಮಾವನ ಮೇಲೆ ದಾಳಿ ನಡೆಸಿದ್ದಾನೆ. ತಂದೆಯ ಜೀವ ಉಳಿಸಲು ಬಂದ ಮಗ ಪ್ರವೀಣ ದಳವಾಯಿಯ ಕುತ್ತಿಗೆಗೂ ಬ್ಲೇಡ್ ನಿಂದ ದಾಳಿ ನಡೆಸಿದ್ದಾನೆ.
ಘಟನೆಯ ಮಾಹಿತಿ ತಿಳಿದ ಅಣ್ಣಿಗೇರಿ ಠಾಣೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಜಗದೀಶ್ ಕಂಬಳಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




