ಚನ್ನಗಿರಿಯಲ್ಲಿ ಹೆಚ್ಚುತ್ತಿವೆ ಕಳ್ಳತನ, ದರೋಡೆ ಪ್ರಕರಣಗಳು: ವೃದ್ಧ, ವೃದ್ಧೆ ಕಟ್ಟಿ ಹಾಕಿ ದರೋಡೆ…!

ದಾವಣಗೆರೆ: ಜಿಲ್ಲೆಯ ಚನ್ನಗಿರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸಂತೇಬೆನ್ನೂರು ಸೇರಿದಂತೆ ಕೆಲವೆಡೆ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಆರೋಪಿಗಳನ್ನು ಆದಷ್ಟು ಬೇಗ ಹಿಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮನೆಯಲ್ಲಿದ್ದ ವೃದ್ದ ಮತ್ತು ವೃದ್ದೆಯರ ಮೇಲೆ ಹಲ್ಲೆ ಮಾಡಿ ಕಟ್ಟಿ ಹಾಕಿ ದರೋಡೆ ಮಾಡಿದ ಘಟನೆ ನಡೆದಿದ್ದು,15 ಲಕ್ಷ ರೂಪಾಯಿ ಹಣ, ೨೦ ತೊಲ ಚಿನ್ನವನ್ನು ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ನಡೆದಿದೆ.
ಹೆಬ್ಬಳಗೆರೆ ಗ್ರಾಮದ ಶಿವಮೂರ್ತಿ, ರತ್ನಮ್ಮ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳು ದರೋಡೆ ಮಾಡಿದ್ದು, ಸುಮಾರು 8ರಿಂದ 10 ಜನರ ಗುಂಪು ಏಕಾಏಕಿ ಮನೆಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿದೆ. ಹೆಬ್ಬಳಗೆರೆ ಗ್ರಾಮದ ಹೊರವಲಯದ ಆಚೆಯ ತೋಟದಲ್ಲಿ ಮನೆಯಲ್ಲಿ ಇದ್ದಾಗ ಈ ಕೃತ್ಯ ನಡೆದಿದ್ದು, ಈ ದರೋಡೆಯಿಂದ ಚನ್ನಗಿರಿ ತಾಲೂಕಿನ ಜನರು ಬೆಚ್ಚಿಬಿದ್ದಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಸರಗಳ್ಳತನ, ದರೋಡೆ ಪ್ರಕರಣಗಳು ಕಳೆದ ಕೆಲ ತಿಂಗಳಿಂದ ಹೆಚ್ಚಾಗುತ್ತಿದ್ದು, ಪೊಲೀಸರು ಗಸ್ತು ಹೆಚ್ಚು ಮಾಡಬೇಕು. ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.




