ಬಾಗಲಕೋಟೆ: ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ: 10 ಬೈಕ್ಗಳು ವಶಕ್ಕೆ

ಬಾಗಲಕೋಟೆ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ತೇರದಾಳ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದು, ಪೊಲೀಸರ ಕಾರ್ಯಕ್ಕೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಪೊಲೀಸ್ ಠಾಣೆಯ ರಬಕವಿ, ಮಹಾಲಿಂಗಪುರ,ಮುಧೋಳ,ಲೋಕಾಪುರ,ಬೆಳಗಾವಿ ಜಿಲ್ಲೆಯ ಕಟಕೋಳ,ಗೋಕಾಕ್ ನಲ್ಲಿ ಇಬ್ಬರು ಕಳ್ಳರು ಬೈಕ್ ಕಳ್ಳತನ ಮಾಡುತ್ತಿದ್ದರು. ಕಳೆದ ವರ್ಷ ರಬಕವಿ ನಗರದ ಆನಂದ್ ಕೋರಿ ಎಂಬುವರ ಮನೆಯ ಮುಂದೆ ನಿಲ್ಲಿಸಿದ್ದ ಮಲಕಪ್ಪ ಬಾಗಿ ಇವರ ಚಿಕ್ಕಪ್ಪ ನಿಗೆ ಸೇರಿದ್ದ ಕೆಎ 27 ಜೆ-6225 ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೈಕ್ ಕಳ್ಳರನ್ನು ಪತ್ತೆ ಹಚ್ಚಲು ಎಸ್ಪಿ ಲೋಕೇಶ್ ಜಗಲಾಸರ ಹಾಗೂ ಜಮಖಂಡಿ ಡಿವೈಎಸ್ಪಿ ಎಮ್ ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ತಂಡವು ಕಳ್ಳತನ ಮಾಡಿದ್ದ ರಬಕವಿ ನಗರದ ಹುಜೇಫಾ ಅತ್ತಾರ, ಜುಬೇರಾ ಶಿಲ್ಲೇದಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 5 ಲಕ್ಷ ಮೌಲ್ಯದ 10 ಬೈಕ್ ಜಪ್ತಿ ಮಾಡಿದ್ದಾರೆ.




