ಯುವತಿ ಆತ್ಮಹತ್ಯೆ 15 ದಿನದ ಬಳಿಕ ಸಿಕ್ಕ ಡೆತ್ ನೋಟ್ : ಎಎಸ್ ಐ ಸೇರಿ 8 ಮಂದಿ ವಿರುದ್ದ ಎಫ್ ಐಆರ್

ಮೈಸೂರು : ಯುವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ 15 ದಿನದ ನಂತರ ಡೆತ್ ನೋಟ್ ಸಿಕ್ಕಿದ್ದು ಈ ಪ್ರಕರಣ ಸಂಬಂಧ ಎಎಸ್ಐ ಸೇರಿದಂತೆ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದ ಯುವತಿ ಆತ್ಮಹತ್ಯೆಗೂ ಮುನ್ನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆದರೆ ಪೊಲೀಸರು ಆಕೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಶಿವರಾಜು ಕರ್ತವ್ಯ ಲೋಪ ಎಸಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಯ ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಸುರೇಶ್, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಸೇರಿ ಎಎಸ್ಐ ಶಿವರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯುವತಿ ಶೋಭಾ ತಮ್ಮದೇ ಗ್ರಾಮದ ಲೋಕೇಶ್ ಎಂಬಾತನನ್ನ 5 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಮದುವೆಯಾಗುವುದಾಗಿ ನಂಬಿಸಿದ ಲೋಕೇಶ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಮಧ್ಯೆ ಸುರೇಶ್ ಎಂಬಾತ ಆಕೆಯ ಜೊತೆ ಮಾತನಾಡಿ ಮಧ್ಯಪ್ರವೇಶಿಸಿದ್ದಕ್ಕೆ ಲೋಕೇಶ್, ಯುವತಿಯಿಂದ ದೂರಾಗಿದ್ದಾನೆ ಎನ್ನಲಾಗಿದೆ.
ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ ಲೋಕೇಶ್ ನಂತರ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಮೋಸ ಮಾಡಿದ್ದಾನೆ ಎಂದು ನ್ಯಾಯ ಒದಗಿಸುವಂತೆ ಮೃತ ಯುವತಿಯ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ದೂರು ಕೊಟ್ಟ ನಂತರ ಲೋಕೇಶ್ ತನ್ನ ಪ್ರಿಯತಮೆಯ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಮನೆಯವರು ಆಕೆಯ ಅಂತ್ಯಕ್ರಿಯೆ ನೆರವೇರಿಸಿ 11 ದಿನಗಳ ಕಾರ್ಯ ಮಾಡಿದ ನಂತರ ಮನೆ ಸ್ವಚ್ಛ ಮಾಡುವಾಗ ಆಕೆ ಬರೆದ ಡೆತ್ನೋಟ್ ದೊರಕಿತ್ತು.
ಲೋಕೇಶ್ ವಂಚಿಸಿದ್ದು, ಸುರೇಶ್ ಹೆದರಿಸಿದ ವಿಚಾರವನ್ನು ಡೆತ್ನೋಟ್ನಲ್ಲಿ ಯುವತಿ ಉಲ್ಲೇಖಿಸಿದ್ದಳು. ತನ್ನ ಸಾವಿಗೆ ಲೋಕೇಶ್ ಕಾರಣವೆಂದು ಡೆತ್ನೋಟ್ನಲ್ಲಿ ಬರೆದಿರುವ ಯುವತಿ, ಲೋಕೇಶ್‌ಗೆ ಜೈಲು ಶಿಕ್ಷೆ ನೀಡಬೇಕು, ಆತನನ್ನು ಗಲ್ಲಿಗೆ ಏರಿಸಬೇಕೆಂದು ಮನವಿ ಮಾಡಿದ್ದಳು.
ಈ ಯುವತಿ ಶೋಭಾಳನ್ನು ಮದುವೆಯಾಗುವುದಕ್ಕೆ ಲೋಕೇಶ್ ತಕರಾರು ತೆಗೆದಿದ್ದ. ಈ ಬಗ್ಗೆ ಸುರೇಶ್ ಎಂಬಾತನ ಬಳಿಯಿಂದ ಕೊಲೆ ಬೆದರಿಕೆ ಹಾಕಿಸಿದ್ದಾನೆ ಎಂದು
ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ಆದ್ರೆ ದೂರು ದಾಖಲಿಸದೆ ಹುಲ್ಲಹಳ್ಳಿ ಠಾಣೆ ಎ.ಎಸ್.ಐ ಶಿವರಾಜುರವರು ಯುವತಿಯನ್ನ ವಾಪಸ್ಸು ಕಳುಹಿಸಿದ್ದರು. ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ತನ್ನ ಹಾಗೂ ಲೋಕೇಶ್ ನಡುವಿನ ಪ್ರೀತಿಗೆ ಸಾಕ್ಷಿ ಇದೆ, ಮೊಬೈಲ್ ನಲ್ಲಿ ವರ್ಷದಿಂದ ಮಾತನಾಡಿರುವ ಕಾಲ್ ರೆಕಾರ್ಡ್ ಇದೆ ಎಂದು ಯುವತಿ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ಈ ನೋವಿನಿಂದ ಸತ್ತರೆ ನನ್ನ ಸಾವಿಗೆ ಇವರೆ ಕಾರಣ. ಇವರನ್ನ ಗಲ್ಲಿಗೇರಿಸಿ ಎಂದು ಡೆತ್ ನೋಟ್ ಬರೆದಿದ್ದಾಳೆ. ಈ ಘಟನೆ ಸಂಭಂದ ಈಗ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕ್ರಮ ಕೈಗೊಳ್ಳಲಾಗಿದೆ.




