ಹು – ಧಾ ಅವಳಿನಗರದ ಕೆಲ ಪೊಲೀಸ್ ಠಾಣೆಗಳನ್ನು ಟೈಟ್ ಮಾಡೋ ಅವಶ್ಯವಿದೆ: ಸಿಎಂ ಬೊಮ್ಮಾಯಿ.

ಧಾರವಾಡ : ಹುಬ್ಬಳ್ಳಿ – ಧಾರವಾಡ ವ್ಯಾಪ್ತಿಯ ಕೆಲ ಪೊಲೀಸ್ ಠಾಣೆಗಳನ್ನು ಬಿಗಿಗೊಳಿಸುವುದು ಅವಶ್ಯವಿದೆ. ಹೀಗೆ ಕೆಲ ಪೊಲೀಸ್ ಠಾಣೆಗಳನ್ನು ಟೈಟ್ ಮಾಡುವುದರಿಂದ ಹುಬ್ಬಳ್ಳಿ ಧಾರವಾಡದಲ್ಲಿ ಮತ್ತಷ್ಟು ಕಾನೂನು ಸುವ್ಯವಸ್ಥೆಯು ಸುಧಾರಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ಕಸಬಾ ಪೊಲೀಸ್ ಠಾಣೆಯ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅವಳಿನಗರಗಳಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಹೀಗಾಗಿ ಐದಾರು ಠಾಣೆಗಳ ಕಾರ್ಯ ವೈಖರಿ ಬದಲಾಗಬೇಕಿದೆ. ಹುಬ್ಬಳ್ಳಿ ಧಾರವಾಡ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದು ಕಷ್ಟವಲ್ಲ, ಆದರೆ ಪೊಲೀಸ್ ಕಮೀಷನರ್ ಗಳು ಹಾಗೂ ಹಿರಿಯ ಅಧಿಕಾರಿಗಳು ಫೀಲ್ಡಿಗೆ ಇಳಿದು ಕೆಲಸ ಮಾಡಬೇಕು. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವದನ್ನ ಬಿಟ್ಟು ಸ್ವತಃ ಠಾಣೆಗಳಗೆ ಭೇಟಿ ನೀಡಿ ಪರಿಶೀಲಿಸಬೇಕು. ಆಗ ಠಾಣೆಯಲ್ಲಿಯ ವಾಸ್ತವ ಅರಿವಾಗುತ್ತದೆ. ಹೀಗೆ ಮಾಡುವದ್ರಿಂದ ಕೆಳಹಂತದ ಅಧಿಕಾರಿಗಳ ಕಾರ್ಯ ವೈಖರಿ ಬದಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನೂ ಮುಂಬರುವ ದಿನಗಳಲ್ಲಿ ಪೊಲೀಸರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು. ಮುಂಚೆ ವರ್ಷಕ್ಕೆ 4-5 ಪೊಲೀಸ್ ಠಾಣೆಗಳು ಮಾತ್ರ ಆಗುತ್ತಿದ್ದವು ಆದರೆ ಮುಂದಿನ ದಿನಗಳಲ್ಲಿ ವರ್ಷಕ್ಕೆ 100 ಠಾಣೆಗಳನ್ನ ಸ್ಥಾಪಿಸಲು ಚಿಂತನೆ ನಡೆಸಿದ್ದೇವೆ. ಅಷ್ಟೇ ಅಲ್ಲದೆ 10000 ಪೊಲೀಸ್ ಕ್ವಾಟರ್ಸಗಳನ್ನು ಸಹ ನಿರ್ಮಿಸುತ್ತಿದ್ದೇವೆ. 17 ಸಾವಿರ ಪೊಲೀಸ್ ಹಾಗು ಪಿಎಸ್ ಐ ನೇಮಕಾತಿ ನಡೆಯುತ್ತಿದೆ. ಎನ್.ಡಿಎ(ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಮಾದರಿಯಲ್ಲಿ ರಾಜ್ಯದ ಡಿವೈಎಸ್ಪಿ ರ‌್ಯಾಂಕ್ ಅಧಿಕಾರಿಗಳ ತರಬೇತಿ ನೀಡಲು ನಾವು ಮುಂದಾಗಿದ್ದೇವೆ ಎಂದರು.




