ರೈತ ಭಾಷಣಕಾರರ ಮೈಕ್ ಕಿತ್ತುಕೊಳ್ಳಲು ಮುಂದಾದ ಪೋಲಿಸ್ ಅಧಿಕಾರಿ

ದೇವನಹಳ್ಳಿ: ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳು ರದ್ದಾಗಬೇಕು ಎಂದು ಆಗ್ರಹಿಸಿ ರಾಷ್ಟ್ರದಾದ್ಯಂತ ನಡೆಯುತ್ತಿರುವ ಅನ್ನದಾತರ ಆಂದೋಲನವನ್ನು ಬೆಂಬಲಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಕೊಟ್ಟಿರುವ ಭಾರತ್ ಬಂದ್ ಚಳುವಳಿಯನ್ನು ಬೆಂಬಲಿಸಿ ಸೋಮವಾರ ದೇವನಹಳ್ಳಿಯಲ್ಲಿ ರೈತರು ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ಕಾಲ್ನಡಿಗೆ ಜಾಥ ನಡೆಸಿ ತಾಲ್ಲೂಕು ಕಛೇರಿಗೆ ಮುಂಭಾಗದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿದ ರೈತರು ಮನವಿ ಸ್ವೀಕರಿಸಲು ತಹಶಿಲ್ದಾರ್ ಸ್ಥಳಕ್ಕೆ ಬರಲು ಪಟ್ಟು ಹಿಡಿದಾಗ ತಹಶಿಲ್ದಾರ್ ಅವರು ಕಛೇರಿಯಲ್ಲಿ ಇಲ್ಲ ಎಂದು ಪೋಲಿಸರು ಮನವೊಲಿಸಿ ರಸ್ತೆ ತಡೆ ಕೈ ಬಿಡಲು ಮನವಿ ಮಾಡಿದಾಗ ರೈತರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ತಾಲ್ಲೂಕು ಕಚೇರಿಯಲ್ಲಿಯೂ ಮನವಿ ಸ್ವೀಕರಿಸಲು ತಹಶಿಲ್ದಾರ್ ಅನಿಲ್ ಕುಮಾರ್ ಅರೋಳಿಕರ್ ಬರದೆ ಗ್ರೇಡ್ 2 ತಹಶಿಲ್ದಾರ್ ಬಂದ್ದಿದ್ದಕ್ಕೆ ಮತ್ತೆ ರೈತರು ಆಕ್ರೋಶ ವ್ಯಕ್ತಪಡಿಸಿ ತಹಶಿಲ್ದಾರ್ ಬರುವವರೆಗೂ ತಾಲ್ಲೂಕು ಕಛೇರಿ ಮುಂದೆ ಧರಣಿ ನಡೆಸಿದರು.

ತಾಲ್ಲೂಕು ಕಛೇರಿ ಮುಂಭಾದಲ್ಲಿ ಧರಣಿ ನಡೆಸುವ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವಕೀಲರಾದ ಸಿದ್ದಾರ್ಥ ಅವರ ಮೈಕ್ ಕಿತ್ತುಕೊಳ್ಳಲು ದೇವನಹಳ್ಳಿ ಪೋಲಿಸ್ ಇನ್ಸ್‌ಪೆಕ್ಟರ್ ರಮೇಶ್ ಜೆ ಮುಂದಾದಾಗ ಪೋಲಿಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು ಪೋಲೀಸರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದ ರೈತರ ಆಕ್ರೋಶ ಹೆಚ್ಚಾದಾಗ ಕೊನೆಗೆ ತಹಶಿಲ್ದಾರ್ ಅನಿಲ್ ಕುಮಾರ್ ಅರೋಳಿಕರ್ ಸ್ಥಳಕ್ಕೆ ಬಂದು ಪೋಲಿಸ್ ಇನ್ಸ್‌ಪೆಕ್ಟರ್ ಕ್ಷಮೆಯಾಚಿಸಿದ ನಂತರ ರೈತರು ತಹಶಿಲ್ದಾರ್ ಅವರಿಗೆ ಮನವಿ ನೀಡಿದರು.
ಕಳೆದ ಹತ್ತು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿ ಕಾರ್ಪೊರೇಟ್ ಗಳ ಪರವಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ಕೇಂದ್ರ ಸರ್ಕಾರ ಕಾರ್ಪೊರೇಟ್ ಗಳಿಗೆ ಮಾರಾಟ ಮಾಡುತ್ತಿದೆ. ಇದರಿಂದ ದೇಶದ ಯುವಜನರ ಉದ್ಯೋಗಕ್ಕೆ ಕುತ್ತು ಬಿದ್ದಿದೆಯಲ್ಲದೆ ಕಾರ್ಪೊರೇಟ್ ಗಳ ಕೈಗೊಂಬೆಯಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮೂರು ಕೃಷಿ ಕಾನೂನುಗಳು ರದ್ದಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ವಿದ್ಯುತ್ ಖಾಸಗೀಕರಣವನ್ನು ಕೈ ಬಿಡಬೇಕು. ಬೆಲೆ ಏರಿಕೆಯನ್ನು ಕೂಡಲೆ ನಿಲ್ಲಿಸಬೇಕು, ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಗಬೇಕು ಮತ್ತು ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಡಬೇಕು ಗೋಹತ್ಯೆ ನಿಷೇಧ ಕೈ ಬಿಡಬೇಕು, ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನರಿಗೆ ಅನ್ಯಾಯ ಎಸಗುತ್ತಿದೆ ಇದರಿಂದ ಜನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ದೇಶದ ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆ ಮಿತಿಮೀರಲಿದೆ ಬಿಜೆಪಿ ಸರಕಾರವನ್ನು ತೊಲಗಿಸದಿದ್ದರೆ ದೇಶ ಉಳಿಯುದಿಲ್ಲ ಎಂದು ರೈತ ಮುಖಂಡರು ಮನವಿ ಮಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಪ್ರೋ. ನಂಜುಂಡಸ್ವಾಮಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಜಿಜಿ ಹಳ್ಳಿ ನಾರಾಯಣಸ್ವಾಮಿ, ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಲಪತಿ, ಉಪಾಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಅಧ್ಯಕ್ಷರಾದ ಮುನಿಶಾಮಪ್ಪ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಖುದ್ದೂಸ್ ಸಾಬ್ , ಗಾರೇ ರವಿಕುಮಾರ್, ಭೀಮ ಶಕ್ತಿ ರಾಜ್ಯಾಧ್ಯಕ್ಷ ವೆಂಕಟೇಶ್, ರೈತ ಸಂಘದ ಜಿಲ್ಲಾಧ್ಯಕ್ಷರಾದ ಹರೀಶ್, ಕನ್ನಮಂಗಲ ನಾಗೇಶ್, ಉಪಾಧ್ಯಕ್ಷ ರಾಮಣ್ಣ, ಹಿರಿಯ ಹೋರಾಟಗಾರ ಸಿದ್ದಾರ್ಥ, ಕಾರಹಳ್ಳಿ ಶ್ರೀನಿವಾಸ್, ಮುದುಗುರ್ಕಿ ನಾರಾಯಣಸ್ವಾಮಿ, ಮಹಿಳಾ ಹೋರಾಟಗಾರರಾದ ಸುಮೀತ್ರ, ಪುಷ್ಪ, ಯುವ ರೈತ ಸಂಘದ ಮುನಿನಾರಾಯಣಪ್ಪ, ಶಶಿಕುಮಾರ್ ಚಿಕೊಬದೇನಹಳ್ಳಿ ರಾಮಾಂಜಿನಪ್ಪ ಸೇರಿದಂತೆ ನೂರಾರು ರೈತರು, ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.




