ಮಲೆನಾಡು-ಕರಾವಳಿ ಸಂಪರ್ಕಿಸುವ ಭವಿಷ್ಯದ ಮತ್ತೊಂದು ರಸ್ತೆ; ಎಳೆನೀರು-ದಿಡುಪೆ ರಸ್ತೆ ಅಭಿವೃದ್ಧಿಗಾಗಿ ಸಮೀಕ್ಷೆಗೆ ಸಮ್ಮತಿ

ಚಿಕ್ಕಮಗಳೂರು: ಅನೇಕ ವರ್ಷಗಳಿಂದ ನನಗುದಿಗೆ ಬಿದ್ದಿದ್ದ ಸಂಸೆ, ಎಳೆನೀರು, ದಿಡುಪೆ ರಸ್ತೆ ಅಭಿವೃದ್ಧಿಗಾಗಿ ಸಮೀಕ್ಷೆಗೆ ಸಮ್ಮತಿ ದೊರಕಿದ್ದು ಈ ರಸ್ತೆ ಅಭವೃದ್ಧಿಯಿಂದ ಮಲೆನಾಡು ಮತ್ತು ಕರಾವಳಿ ಸಂಪರ್ಕಿಸಬಹುದಾದ ಮತ್ತೊಂದು ರಸ್ತೆಯಾಗಲಿದೆ.
ಕಳಸ ತಾಲೂಕಿನ ಸಂಸೆ ಸಮೀಪದ ಎಳನೀರು ಎಂಬುದು ಕುಗ್ರಾಮವಾಗಿದ್ದು, ಇಲ್ಲಿ ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿದ್ದು, ಆಡಳಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿದೆ.

ಎಳನೀರಿನಿಂದ ದಿಡುಪೆಗೆ ಇರುವ ಅಂತರ 10 ಕಿ.ಮೀ. ಕಚ್ಚಾರಸ್ತೆಯಿದ್ದು ಇದು ಅಭಿವೃದ್ಧಿಯಾಗಬೇಕು. ದಟ್ಟ ಅರಣ್ಯದ ಮದ್ಯೆ ರಸ್ತೆ ಹಾದುಹೋಗಿದ್ದು, ಅರಣ್ಯ ಇಲಾಖೆಯ ಸಮ್ಮತಿ ದೊರಕಿಲ್ಲ. ಪರಿಸರವಾದಿಗಳು ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮಸ್ಥರು ತಮ್ಮ ಸಮಸ್ಯೆ ಬಗೆಹರಿಯಲು, ಅನಾನುಕೂಲತೆ ತಪ್ಪಿಸಲು ರಸ್ತೆ ಆಗಲೇಬೇಕೆಂದು ಪಟ್ಟುಹಿಡಿದಿದ್ದಾರೆ. ಮಳೆಗಾಲದಲ್ಲಿ ಈ ಕುಗ್ರಾಮದ ಜನ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ.
ಸಂಸೆ-ಕೆರೆಕಟ್ಟೆ ಬಜೆಗೋಳಿ- ಗುರುವಾಯನಕೆರೆ ಮೂಲಕ ಬೆಳ್ತಂಗಡಿಗೆ ಸುಮಾರು 150 ಕಿ ಮೀ ಕ್ರಮಿಸಿ ಹೋಗಬೇಕು. ಹೀಗಾಗಿ ಜನರ ಬೇಡಿಕೆಯಂತೆ ಎಳೆನೀರು-ದಿಡುಪೆ ರಸ್ತೆ ಅಭಿವೃದ್ಧಿಯಾಗಬೇಕಿದ್ದು, ಇದರ ಒಟ್ಟು ದೂರ, ನಿರ್ಮಿಸಬೇಕಾಗಿರುವ ಮೋರಿಗಳು ಸೇರಿದಂತೆ ಇನ್ನಿತರ ಎಲ್ಲ ಮಾಹಿತಿಯನ್ನು ಒಳಗೊಂಡ ವರದಿಯನ್ನು ನೀಡುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಬೆಳ್ತಂಗಡಿಯ ಲೋಕೋಪಯೋಗಿ ಇಲಾಖೆಗೆ ಪತ್ರ ಬಂದಿದೆ.




