ಕ್ರಿಮಿನಲ್ ಮತ್ತು ಲೂಟಿ ಸರ್ಕಾರ; ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳಾಗಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯವಾದ ಬೆಲೆ ಏರಿಕೆ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ಬಿಜೆಪಿಯ ಪರಮೋಚ್ಚ ನಾಯಕರಾಗಿದ್ದ ವಾಜಪೇಯಿ ಹೇಳಿದ ಮಾತನ್ನೇ ಸದನದಲ್ಲಿ ಪ್ರಸ್ತಾಪಿಸಿ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
1973ರಲ್ಲಿ ಅಂದಿನ ಬಿಜೆಪಿ ಪರಮೋಚ್ಚ ನಾಯಕರಾಗಿದ್ದ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಪೆಟ್ರೋಲ್ ಬೆಲೆ ಕೇವಲ 7 ಪೈಸೆ ಹೆಚ್ಚಿಗೆ ಮಾಡಿದ್ದಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಕ್ರಿಮಿನಲ್ ಮತ್ತು ಲೂಟ್ ಸರ್ಕಾರ ಎಂದು ಜರಿದಿದ್ದರು. ನಾನು ಬೇರೆ ಪದ ಉಪಯೋಗ ಪ್ರಯೋಗಿಸುವುದಿಲ್ಲ. ವಾಜಪೇಯಿ ಮಾತನ್ನೇ ಪುನರುಚ್ಚರಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರಗಳಿಗೆ ತಿರುಗೇಟು ನೀಡಿದರು.
ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಿನಲ್ ಮತ್ತು ಲೂಟಿ ಸರ್ಕಾರ ಎಂದು ಬಿಜೆಪಿ ನಾಯಕನ ಮಾತನ್ನೇ ಬಿಜೆಪಿ ವಿರುದ್ಧ ಬಳಸಿ ವಾಗ್ದಾಳಿ ನಡೆಸಿದರು.
ಮನಮೋಹನ್ ಸಿಂಗ್ ಕಾಲದಲ್ಲಿ ಡೀಸೆಲ್ ಬೆಲೆ ಒಂದು ಲೀಟರ್ ಗೆ 47 ರೂಪಾಯಿ ಇತ್ತು. ಈಗ 96 ರೂಪಾಯಿಗೆ ಅಂದರೆ ಎರಡು ಪಟ್ಟು ಹೆಚ್ಚಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 105 ರೂಪಾಯಿಗೆ ಮುಟ್ಟಿದೆ. ಇದರಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದೆ ಎಂದು ಸರ್ಕಾರವನ್ನು ಟೀಕಿಸಿದರು.
ತೈಲ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಬಳಸುವ ದಿನಬಳಕೆ ವಸ್ತುಗಳು ಗಗನ ಮುಟ್ಟಿದ್ದು ಬಡವರ್ಗ ಕಷ್ಟಕ್ಕೆ ಸಿಲುಕಿಕೊಂಡಿದೆ ಎಂದರು.
ವಿಧಾನಸಭೆಗೆ ಅಪಮಾನ ಸಲ್ಲದು
ಆರು ತಿಂಗಳ ಅವಧಿಯಲ್ಲಿ ವಿಧಾನಮಂಡಲ ಕಲಾಪ ನಡೆಸಬೇಕಿತ್ತು. ನಾವು ಇಂತಹ ಗಂಭೀರ ವಿಚಾರಗಳನ್ನು ಎಲ್ಲಿ ಪ್ರಸ್ತಾಪಿಸಬೇಕು, ಎಲ್ಲಿ ಉತ್ತರ ಪಡೆಯಬೇಕು ಎಂದು ಪ್ರಶ್ನಿಸಿದರು. ನಾವೇ ಮಾಡಿಕೊಂಡ ನಿಯಮದಂತೆ ವಿಧಾನಸಭೆ ಅಧಿವೇಶನವನ್ನು ಕಾಲ,ಕಾಲಕ್ಕೆ ಕರೆಯದೇ ಈ ಸರ್ಕಾರ ವಿಧಾನಸಭೆಗೆ ಅಪಮಾನ, ಅಪಚಾರ ಮಾಡುತ್ತಿದೆ ಎಂದು ಹೇಳಿದರು.
ವಿಧಾನಮಂಡಲ ಅಧಿವೇಶನ ವಿಸ್ತರಣೆಗೆ ಆಗ್ರಹ
ಈಗ ಕೇವಲ 10 ದಿನಗಳ ಅಧಿವೇಶನ ಕರೆಯಲಾಗಿದೆ. ಸಾಕಷ್ಟು ವಿಷಯಗಳನ್ನು ಎಲ್ಲಾ ಸದಸ್ಯರು ಪ್ರಸ್ತಾಪಿಸಲು ಅವಕಾಶ ಸಿಗದು. ಕಡೆಯ ಪಕ್ಷ ಇನ್ನೂ 10 ದಿನಗಳ ಕಾಲ ಅಧಿವೇಶನ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ಐದು ದಿನವಾದರೂ ಅಧಿವೇಶನ ಮುಂದುವರಿಸಲೇಬೇಕು ಇದನ್ನು ಕಲಾಪ ಸಲಹಾ ಸಮಿತಿಯಲ್ಲಿ ಸರ್ಕಾರಕ್ಕೆ ಒತ್ತಿ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಮಾಧುಸ್ವಾಮಿ ಸಮಜಾಯಿಷಿ
ಕೊರೋನಾ ಕಾಟದಿಂದಾಗಿ ಒಂದು ತಿಂಗಳು ಸದನ ಕರೆಯುವುದು ವಿಳಂಬವಾಗಿದೆ. ನಾವು ಉದ್ದೇಶಪೂರ್ವಕವಾಗಿ ಯಾವುದೇ ವಿಳಂಬ ಮಾಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಸರ್ಮರ್ಥನೆ ನೀಡಿದರು.
