ಚಿಕ್ಕಮಗಳೂರು

ಕೃಷಿ ಭೂಮಿಯಲ್ಲಿ ಬಡಾವಣೆ ನಿರ್ಮಿಸಲು ರೈತರ ವಿರೋಧ; ಪ್ರತಿಭಟನೆ

ಚಿಕ್ಕಮಗಳೂರು: ರೈತರ ಭೂಮಿಯನ್ನು ಕಸಿದು, ಬಡಾವಣೆ ನಿರ್ಮಿಸಲು ನಗರಾಭಿವೃದ್ಧಿ ಪ್ರಾಧಿಕಾರ ಯತ್ನಿಸಿದೆ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಸಮೀಪವಿರುವ ಹಿರೇಮಗಳೂರು, ಕುರುವಂಗಿ, ಚಿಕ್ಕ ಕುರುಬರಹಳ್ಳಿ, ಕನ್ನೇನಹಳ್ಳಿ, ಬಿಳೇಕಲ್ಲು ಸಹಿತ ಇತರೆ ಹಳ್ಳಿಗಳ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸಲು ಉದ್ದೇಶಿಸಿ, ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿತ್ತು. ನೀಲನಕ್ಷೆಯನ್ನು ತಯಾರಿಸಿ, ರೈತರೊಂದಿಗೆ ಮಾತುಕತೆ ನಡೆಸಿದೆ. ಆದರೆ ಭೂಸ್ವಾಧೀನಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

ರೈತರನ್ನು ಬೀದಿಗೆ ತಂದು ನಿಲ್ಲಿಸುವ ಪ್ರಯತ್ನ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೃಷಿಕರು ಅಡಿಕೆ ಸೇರಿದಂತೆ, ಅನೇಕ ಬೆಳೆಗಳನ್ನು ಬೆಳೆದಿದ್ದು, ವರ್ಷಕ್ಕೆರಡು ಬಾರಿ ಫಸಲು ಲಭ್ಯವಾಗಿ ರೈತರು ನೆಮ್ಮದಿ ಕಂಡುಕೊಂಡಿದ್ದಾರೆ. ಹೀಗಿರುವಾಗ ಇಲ್ಲಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಿಸುವ ಉದ್ದೇಶ ಹೊಂದಿದ್ದು, ಇದರ ಹಿಂದೆ ಭೂ ಮಾಫಿಯಾದ ಕೈವಾಡವಿರುವ ಶಂಕೆಯಿದೆ. ಕೃಷಿ ವಿಸ್ತರಣೆಯ ಬಗ್ಗೆ ಮಾತನಾಡುತ್ತಲೇ ಇನ್ನೊಂದೆಡೆ ರೈತರ ಭೂಮಿಯನ್ನು ಕಸಿದುಕೊಳ್ಳುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಮುಖಂಡರಾದ ದೇವರಾಜ್, ರೇಣುಕಾರಾಧ್ಯ, ಅಂಶುಮಂತ್, ರವೀಶ್ ಬಸಪ್ಪ, ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button