ಕಸ್ತೂರಬಾ ಟ್ರಸ್ಟ್ ಜಮೀನು ಹಂಚಿಕೆಯಲ್ಲಿ ಅನ್ಯಾಯ: ಭೂರಹಿತರಿಂದ ಆಕ್ರೋಶ

ವರದಿ: ಕಿರುಗುಂದ ರಫೀಕ್
ಚಿಕ್ಕಮಗಳೂರು: ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಂದ ಗೇಣಿದಾರರಿಗೆ ನೀಡಲಾಗುವ ಭೂಮಿಯನ್ನು ಜಮೀನು ಇದ್ದವರಿಗೇ ಹಸ್ತಾಂತರಿಸುವ ಮೂಲಕ ಬಡ, ಭೂರಹಿತ ಕುಟುಂಬಗಳಿಗೆ ಅನ್ಯಾಯ ಮಾಡಿದ್ದಾರೆ ಎಂಬ ಕೂಗು ಕೇಳಿಬಂದಿದೆ. ಸುಮಾರು 35 ವರ್ಷಗಳ ಹಿಂದಿನಿಂದಲೂ ಗೇಣಿದಾರರಾಗಿದ್ದ ಕುಟುಂಬಸ್ಥರನ್ನು, ಭೂರಹಿತರನ್ನು ಈಗ ಕಡೆಗಣಿಸಿ, ಹೆಚ್ಚು ಜಮೀನು ಉಳ್ಳವರ ಕೈಗೆ ಜಾಗವನ್ನು ಕೊಟ್ಟಿರುವುದು ಮೂಲ ಗೇಣಿದಾರರ, ಭೂರಹಿತರ ಆಕ್ರೋಶಕ್ಕೆ ಕಾರಣವಾಗಿದೆ.
ಬಣಕಲ್ ಸಮೀಪದ ಭಾರತಿಬೈಲು, ಬಿ.ಹೊಸಹಳ್ಳಿ ಗ್ರಾಮದಲ್ಲಿ ಟ್ರಸ್ಟಿಗೆ ಒಳಪಟ್ಟ 42 ಎಕರೆ ಜಾಗವಿದೆ. ಇಲ್ಲಿ ತಲಾಂತರದಿಂದ ಗೇಣಿಗೆ ಪಡೆದು ಕೃಷಿ ಮಾಡುತ್ತ ಬಂದ ಕುಟುಂಬಸ್ಥರು ಕೆಲ ವರ್ಷಗಳ ಹಿಂದೆ ನೀರಾವರಿ ಸಮಸ್ಯೆಯಾಗಿ ಗದ್ದೆಯಲ್ಲಿ ಭತ್ತ ಬೆಳೆಯದೆ ಕೃಷಿ ಚಟುವಟಿಕೆ ಸ್ಥಗಿತಗೊಳಿಸಿದ್ದರು. ನಂತರದಲ್ಲಿ ಮತ್ತೆ ಕೃಷಿ ಆರಂಭಿಸುವುದಾಗಿ ಗೇಣಿ ಜಮೀನಿಗೆ ಮರಳಿ ಅವಕಾಶ ಮಾಡಿಕೊಡಲು ಟ್ರಸ್ಟ್ ನವರಲ್ಲಿ ಕೇಳಿಕೊಂಡಿದ್ದಾರೆ. ಆದರೆ ಟ್ರಸ್ಟ್ ನವರು ಗೇಣಿಗೆ ಪಾವತಿಸುವ ಮೊತ್ತವನ್ನು ಹೆಚ್ಚಿಸಿದ್ದಾರೆ. ಪ್ರತೀ ಎಕರೆಗೆ 10 ಸಾವಿರ ರೂಪಾಯಿ ನಿಗದಿಗೊಳಿಸಿದ ಪರಿಣಾಮ ಮೂಲ ಗೇಣಿದಾರ ಬಡಕುಟುಂಬಸ್ಥರಿಗೆ ಅಷ್ಟೊಂದು ಹಣ ಕಟ್ಟಲು ಸಾಧ್ಯವಾಗಿಲ್ಲ. ಗೇಣಿ ಪಾವತಿ ಹಣವನ್ನು ಕಡಿತಗೊಳಿಸಲು ಕೇಳಿಕೊಂಡಾಗ ಅದಕ್ಕೆ ಟ್ರಸ್ಟ್ ನವರು ಒಪ್ಪಲಿಲ್ಲ. ಬಳಿಕ ಏಕಾಏಕಿ ತೀರ್ಮಾನ ಕೈಗೊಂಡು ಭೂರಹಿತರನ್ನು ಕಡೆಗಣಿಸಿ ಜಮೀನು ಉಳ್ಳವರಿಗೆ ಅವಕಾಶ ಕೊಟ್ಟಿದ್ದಾರೆಂಬ ಅಂಶ ಬೆಳಕಿಗೆ ಬಂದಿದ್ದು ಈ ಪ್ರಕ್ರಿಯೆಯು ಮೂಲ ಗೇಣಿದಾರ ಕುಟುಂಬಸ್ಥರ ವಿರೋಧಕ್ಕೆ ಕಾರಣವಾಗಿದೆ.

ಭೂರಹಿತರಿಗೆ ಮತ್ತು ಒಂದೆರಡು ಎಕರೆ ಜಮೀನು ಹೊಂದಿದವರಿಗೆ ಗೇಣಿಗೆ ಕೊಟ್ಟಿದ್ದರೆ, ಅಥವಾ ಗೋಶಾಲೆಗಾದರೂ ಕೊಟ್ಚಿದ್ದರೆ ಮೂಲ ಗೇಣಿದಾರರು ಪ್ರಶ್ನಿಸುತ್ತಿರಲಿಲ್ಲ. ಹತ್ತಾರು ಎಕರೆ ಹೊಂದಿದ ಸ್ಥಿತಿವಂತರಿಗೆ ಕೊಟ್ಟಿದ್ದೇಕೆ ಎಂದು ಮೂಲ ಗೇಣಿದಾರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮಗೆ ಗೇಣಿ ಜಮೀನು ಕೊಡಿ ಎಂದು ಟ್ರಸ್ಟಿನವರಲ್ಲಿ ಕೇಳುತ್ತಲೇ ಬಂದಿದ್ದೇವೆ. ಒಮ್ಮೆ ಒಪ್ಪಿದ್ದರು. ಅರ್ಜಿ ಕೊಡಿ ಎಂದಿದ್ದರು. ನಂತರ ಟ್ರಸ್ಟ್ ನಿಂದ ಎಲ್ಲರಿಗೂ ಪತ್ರ ಕಳಿಸುತ್ತೇವೆಂದರು. ಆದರೆ ಯಾವುದೇ ಪ್ರಕ್ರಿಯೆ ನಡೆಸಲಿಲ್ಲ. ಸುಮಾರು 1 ವರ್ಷದಿಂದ ಅಲೆದಾಟ ನಡೆಸಿದ್ದೇವೆ. ಮೂಲ ಗೇಣಿದಾರರಾದ ನಮಗೇ ಜಾಗ ಕೊಡುವುದಾಗಿ ಹೇಳಿದವರು ಇವತ್ತಿನವರೆಗೂ ಕೊಟ್ಟಿಲ್ಲ. ಇಲ್ಲಿ ಎಲ್ಲರೂ ಕೂಲಿಕಾರ್ಮಿಕರೇ ಇರುವುದು. ಮನೆ ಬಿಟ್ಟರೆ ಬೇರೆ ಜಾಗ ಹೊಂದಿಲ್ಲ. ನಮ್ಮನ್ನು ಸಂಪೂರ್ಣ ನಿರ್ಲಕ್ಷಿಸಿ, ಸ್ಥಿತಿವಂತರಿಗೆ ಹೆಚ್ಚು ಎಕರೆ ಗೇಣಿಗೆ ಕೊಡಲಾಗಿದೆ. ಇದನ್ನು ಟ್ರಸ್ಟ್ ನವರಲ್ಲಿ ಪ್ರಶ್ನಿಸಿದ್ದೇವೆ. ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಹೊಸದಾಗಿ ಗೇಣಿಗೆ ಪಡೆದವರು ಜಮೀನಿನಲ್ಲಿ ಕಾಫಿ, ಅಡಕೆ ಗಿಡಗಳನ್ನು ಹಾಕುತ್ತಿದ್ದಾರೆ. ಇಂತಹ ಅನ್ಯಾಯವನ್ನು ನಾವು 33 ಕುಟುಂಬಸ್ಥರು ವಿರೋಧಿಸುತ್ತಿದ್ದೇವೆ ಎಂದು ಮೂಲ ಗೇಣಿದಾರ ಕುಟುಂಬಸ್ಥರಾದ ಬಿ.ಎಸ್.ಉಮೇಶ್ ಆಚಾರ್, ಪೂರ್ಣೇಶ್, ಯೋಗೇಶ್, ಸುಂದ್ರೇಶ್, ಸುರೇಶ್, ಬೆಳ್ಳಿಶೆಟ್ರು ಸಚಿನ್, ಮಂಜುನಾಥ್ ಶೆಟ್ಟಿ, ರಾಮಪೂಜಾರ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಉಪವಿಭಾಗಾಧಿಕಾರಿಗಳನ್ನು ಪ್ರಶ್ನಿಸಿದರೆ, ಅಕ್ರಮವಾಗಿ ಬೇಲಿ ಹಾಕಿದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಗೇಣಿಗೆ ನಿಗದಿಪಡಿಸಿದ ಹಣ ಪಾವತಿಸಿದವರಿಗೆ ಜಮೀನು ನೀಡಲಾಗುತ್ತಿದೆ ಎಂದಿದ್ದಾರೆ.




